
ಅರೇ ! ಆ ಟಿ.ವಿ ಅಂಗಡಿ ಮುಂದೆ ಅಷ್ಟೊಂದು ಜನಾ ಇದಾರೆ ! ಇವತ್ತು ಮ್ಯಾಚ್ ಕೂಡ ಇಲ್ಲಾ... ಹೊಸ ಸಿನಿಮಾನೂ ರಿಲೀಸ್ ಆಗಿಲ್ಲಾ... ಥೂ ! ಹಾಳಾದ್ ಜನಾ ಕೆಲಸಾ ಇಲ್ದೇ.. ಅಂಗಡಿ ಮುಂದೆ ಗರುಡಗಂಭದ ತರಹ ನಿಂತಿರ‍್ತಾರೆ... ಮತ್ತು ಅವರು ಹಾಗೇ ನಿಂತಾಗೆಲ್ಲಾ ನಾನೂ ಹೋಗಿ ನಿಲ್ಲಬೇಕೂ ಅನ್ನೋ ಆಸೆ ಕಿಬ್ಬೊಟ್ಟೆಯಾಳದಿಂದ ಎದ್ದು ಬಂದು ಕಾಡುತ್ತೆ.. ಸುಡುಗಾಡು ! ನೋಡೇ ಬಿಡೋಣ ಅಂತ ಹೋಗಿ ನಿಂತೆ... ರಷ್ಯನ್ ಹುಡುಗಿ(!)ಯೊಬ್ಬಳು ಪೋಲ್ ಡಾನ್ಸ್ ಮಾಡ್ತಾ ಇದ್ಲು... 52ಇಂಚಿನ ಚಪ್ಪಟೆ ಟಿ.ವಿಯಲ್ಲಿ ಅವಳ ನೀಳಕಾಲುಗಳು ಇನ್ನಷ್ಟು ಮಿರಮಿರನೆ ಮಿಂಚ್ತಾ ಇತ್ತು. ಅವಳು ಇನ್ನೇನು ಕೆಳಗೆ ಕೂರು ಜರ್ಕ್ ಹೊಡಿತಾಳೇ ಅನ್ನೋವಷ್ಟರಲ್ಲಿ ''ಆರೋಗ್ಯದ ರಕ್ಷಣೆಯ ಮಾಡುವುದು ಲೈಫ್ ಬಾಯ್..." ಅಂತ ಆಡ್ ಬರೋಕೆ ಶುರುವಾಯ್ತು. ನೋಡ್ತಿದ್ದವರಲ್ಲಿ ಕೆಲವರು ಉಗುಳು ನುಂಗಿಕೊಂಡು, ಇನ್ನು ಕೆಲವರು ಉಗುಳಿಕೊಂಡು ಹೊರಟರು. ನಾನೂ ಹೊರಡೋಕೆ ಅಂತ ತಿರುಗೋ ಮೊದಲು ಕಾಣಿಸ್ತು. ಅದು.... ಉದ್ದಾನುದ್ದ ರಸ್ತೆಯೊಂದರ ತುದಿಯಿಂದ ಧೊಳೆಬ್ಬಿಸುತ್ತಾ ಬರ‍್ತಾ ಇತ್ತು. ಹೌದು ! ಇದು ಅದೇ ಕಾರು... ಈ ಜಾಹಿರಾತು ಎಷ್ಟು ಸಲ ನೋಡಿಲ್ಲಾ ನಾನು... ಬರ‍್ತಾ ಬರ‍್ತಾ ಸ್ಪೀಡ್ ಜಾಸ್ತಿ ಆಗತ್ತೆ... ಸಡನ್ ಬ್ರೇಕ್ ಹಾಕಿ ಒಂದು ಸೆಮಿ ಸರ್ಕಲ್, ಮತ್ತೊಂದು ಫುಲ್ ಸರ್ಕಲ್ ಹಾಕುತ್ತೆ ಈ ಕಾರು... ಅದರ ಪ್ರತಿ ಮೂಲೆ, ಪ್ರತಿ ಚಲನೆಯ ಪರಿಚಯ ನನಗಿದೆ... ನನ್ನ ಕನಸಿನ ಕಾರು... ಇದೊಂದು ತಗೊಳ್ಳೋಕೆ ಆಗಿಲ್ಲಾ... ಈಗ ಹತ್ರ ಬರತ್ತೆ... ಅದರ ಲೋಗೋ ಈಡೀ ಟಿ.ವಿ ಪರದೆ ತುಂಬಾ ತುಂಬಿಕೊಳ್ಳತ್ತೆ... ಹಾಗೂ ಕೊನೇ ಗಳಿಗೇಲಿ ಆ ಲೋಗೋ ಒಡೆದು ಕಾರು ಚಿಮ್ಮಿ ಬರುತ್ತೆ... ಎಷ್ಟೋ ಸಾರಿ ಕೈ ಚಾಚಿ ಹಿಡಿದುಕೊಳ್ಳೋಣ ಅನ್ನಿಸಿದೆ. ಛೇ ! ಕರೆಂಟ್ ಹೋಯ್ತು... ಇಲ್ಲಾ ಈ ಸಾರಿ ಏನೇ ಆದ್ರೂ ಬಿಡಾಬಾರ‍್ದು... BMWತೊಗೊಂಡೇ ಬಿಡಬೇಕು. ಹೇಗಿದ್ರೂ ಆಫೀಸಲ್ಲಿ ಮಿಕ್ಕವರೆಲ್ಲಾ ಕೆಲ್ಸ ಬಿಟ್ಟು 'ಹಾಳೂರಿಗೆ ಗೌಡ' ಆಗಿದೀನಿ. ಈ ಸಲ ಒಳ್ಳೇ ಕಮೀಷನ್‌ನೇ ಬರಬಹುದು... ಯೋಚಿಸುತ್ತಾ ಲಿಫ್ಟ್ ಏರಿ ಬಾಗಿಲು ಹಾಕ್ಕೊಂಡೆ. ಸ್ವಲ್ಪ ಹೊತ್ತಿಗೆ ಫಸ್ಟ್ ಫ್ಲೋರ್ ಅಂತ ಉಲಿಯಿತು ಲಿಫ್ಟ್. BMWನೂ ಥೇಟ್ ಹೀಗೆ... ಅದಿಕ್ಕೆ ಸರ್ವಿಸೇ ಮಾಡಿಸಬೇಕಾಗಿಲ್ವಂತೆ... ಅದಿಕ್ಕೆ ಸರ್ವಿಸ್ ಯಾವಾಗ ಬೇಕೂ ಅಂತ ಅದೇ ತಿಳಿಸುತ್ತಂತೆ... ನನ್ನ ಟೇಬಲ್ಗೆ ಹೋಗಿ ಕೂತು ಇಂಟರ್‌ಕಾಂಗೆ ಫೋನ್ ಮಾಡಿ ಕೇಳ್ದೆ... ಕಮಿಷನ್ ಹಣ ಬ್ಯಾಂಕಿಗೆ ಹಾಕಾಯ್ತಾ ? ಅಂತ. ಹಣ ಹಾಕಿ ಆಗಿತ್ತು. ಖುಷಿಯಾಯ್ತು... ತುಂಬಾನೆ, ಟಾಯ್ಲಿಟ್ಟಿಗೆ ಪುಷ್ಕಳವಾಗಿ ಉಚ್ಛೆ ಹೂಯ್ದು ಬಂದೆ... ಏನೋ ರಿಲೀಫ್. ಫೋನ್ ಮಾಡಿ ಹೇಳ್ದೆ... "ಚೆಕ್ ಕಳಿಸ್ತಾ ಇದೀನಿ, BMWಬೇಕೂ... ಕಪ್ಪು ಬಣ್ಣದ್ದೇ ಆಗಿರಬೇಕು... ನಾನು ಹೇಳಿದ ದಿನಾನೇ ಡೆಲಿವರಿ ಕೊಡಬೇಕು" ಅಂತ. ತಕ್ಷಣ ಹೆಂಡ್ತಿ ಜ್ಞಾಪ್ಕ ಬಂದ್ಲು. ಆಫೀಸಿಗೆ ಬಂದ ಅರ್ಧಗಂಟೆಯೊಳಗೆ ಅವಳಿಗೆ ಫೋನ್ ಮಾಡೋದು ವರ್ಷಗಟ್ಟಳೆಯಿಂದ ಪಾಲಿಸಿಕೊಂಡು ಬಂದಿರೋ ಪದ್ದತಿ. ಇವತ್ತು ಲೇಟಾಯ್ತು ? ಇಲ್ಲಾ ಇನ್ನೂ ಆರು ನಿಮಿಷ ಇದೆ. ಫೋನ್ ಮಾಡಿ ಹೇಳ್ದೆ "ಅಪ್ಪಿ, ಆಫೀಸ್ ತಲುಪಿದೆ..." ಫೋನ್ ಇಡೋ ಮುಂಚೆ ಅಕ್ಕ ಪಕ್ಕ ನೋಡಿ "ಲವ್ ಯೂ" ಅಂದು ಫೋನ್ ಇಟ್ಟೆ. ಪ್ರೀತಿಯೆಂದರೇ ಇದೇನಾ ??? ನಾನು ಹೀಗೆ ದಿನಾ ತಪ್ಪದೇ ಫೋನು ಮಾಡೋದು ಪ್ರೀತಿಯಿಂದಾನ ಅಥ್ವಾ ಅನುಮಾನದಿಂದಾನಾ ? ಈ ಜಿಜ್ಞಾಸೆ ತುಂಬಾ ಸಲ ಕಾಡಿದೆ... ಇಲ್ಲಾ ಅನುಮಾನ ಇರೋದಿಲ್ಲಾ... ಈ ವಯಸ್ಸಲ್ಲಿ ನಾವು ಒಬ್ಬರಿಗೊಬ್ಬರು ಅವಶ್ಯಕತೆ ಆಗೋಗಿದೀವಿ, ಮಕ್ಕಳಿದ್ದಿದ್ದಿದ್ರೆ ಅ ಮಾತು ಬೇರೆ... ನಮಗೇ ಮಕ್ಳಿಲ್ಲಾ... ಇದೊಂದು ವಿಷ್ಯಕ್ಕೆ ಅದೆಷ್ಟು ಜನಾ ಅದೆಷ್ಟು ರೀತಿ ಕಾಡಿಸಿದಾರೆ... "ಲೇಟಾಗಿ ಮದ್ವೆಯಾಗಿದ್ದಕ್ಕೆ ಹೀಗೆ ಆಗಿರ‍್ಬೇಕು... ಒಂದು ಮಗೂನಾ ಯಾಕೆ ದತ್ತು ತಗೋ ಬಾರದು... ಅಶ್ವಿನಿ ಹೋಮಿಯೋ ಕ್ಲಿನಿಕ್‌ಗೆ ಹೋಗ್ರೀ... ಖಂಡಿತಾ ಮಕ್ಳಾಗುತ್ತೇ... ಇಬ್ರಲ್ಲಿ ಯಾರಿಗಂತೆ ಪ್ರಾಬ್ಲಂ ?" ಪ್ರಶ್ನೆಗಳ ಸುರಿ ಮಳೆ ಮೊದ್ಲು ಧಾರಾಕಾರವಾಗಿ ಬೀಳ್ತಾ ಇದ್ದದ್ದು ದಿನಾ ಕಳೆದಂತೆ ಕಡಿಮೆಯಾಗಿ ಈಗ ಆಗೊಮ್ಮೆ-ಈಗೊಮ್ಮೆ ಬೀಳುತ್ತೆ. ಆದ್ರೆ ನನ್ನ ಹೆಂಡ್ತಿ ಒಂದು ದಿನಾನೂ ಈ ಬಗ್ಗೆ ಉಸಿರೆತ್ತಿಲ್ಲಾ... ಇದಿಕ್ಕೇ ನೀವೇ ಕಾರಣ ಅಂತ ದೂಷಿಸಿಲ್ಲ... ನಾನೇ ಕಾರಣ ಅಂತಾನೂ ಹೇಳಿಲ್ಲಾ... ನಾನೂ ಅಷ್ಟೇ... ಹಾಗಾಗೆ ಪರಸ್ಪರ ಗೌರವ ಹುಟ್ಟಿದೆ... ಇದೆಲ್ಲಾ ಆದ ಮೇಲೇನೆ ಈ ಕಾರ್ ಕ್ರೇಜ್ ಶುರುವಾಗಿದ್ದು... ಶುಕ್ರವಾರ ತೊಗೊಳ್ಳೋಣ ಡೆಲಿವರಿ... ಮಿಕ್ಕೆಲ್ಲಾ ಕಾರುಗಳನ್ನೂ ಶುಕ್ರವಾರನೇ ತಂದಿದ್ದು... ರಾಹುಕಾಲ ಎಷ್ಟು ಹೊತ್ತಿಗೋ ನೋಡಬೇಕೂ... ಕಡೆಗೂ ಶುಕ್ರವಾರ ಬಂದೇ ಬಿಡ್ತು... ಆಫೀಸಲ್ಲಿ ಅವತ್ತೇ ವಿಪರೀತ ಕೆಲ್ಸಾ... ಮನೆಯಿಂದ ಫೋನ್ ಬಂತು "ಡೆಲಿವರಿ ಬಂತೂ" ಅಂತ. ಕೆಲಸದಲ್ಲಿ ಮನಸ್ಸು ನಿಲ್ತಾನೇ ಇಲ್ಲಾ... ಯಾವಾಗ ಮನೆಗೆ ಹೋಗ್ತಿನೋ ಅಂತ... ಆಫೀಸಿಂದ ಹೊರಟಾಗ ರಾತ್ರಿ 9 ಗಂಟೆ... ಮನೆ ತಲುಪೋವಷ್ಟರಲ್ಲಿ ಲೈಟ್‌ಗಳೆಲ್ಲಾ ಆಫ್ ಆಗಿದ್ವು... ಮಾತ್ರೆ ತಗೋಳ್ಳೊದ್ರಿಂದ ಅವ್ಳು ರಾತ್ರಿ ಬೇಗ ಮಲಗ್ತಾಳೆ... ನನ್ನ ಹತ್ರ ಇದ್ದ ಕೀ ಯಿಂದ ಡೋರ್ ಓಪನ್ ಮಾಡಿ ಒಳಹೋಗಿ ಕೂತೆ... ಫ್ರಿಡ್ಜ್ ಓಪನ್ ಮಾಡ್ದೆ... ಯಾಕೋ ಏನೂ ಬೇಡವೆನ್ನಿಸಿ ನೀರು ಮಾತ್ರ ಕುಡಿದೆ... ರೂಮಲ್ಲಿ ಅವ್ಳು ಮಲಗಿರೋದು ಕಾಣಿಸ್ತು... ಸದ್ದಾಗದೆ ಹತ್ತಿರ ಹೋಗಿ ಕಾಟ್ ಕೆಳಗಿರೋ ಪ್ಯಾಕೆಟ್ ಹೊರ ತೆಗೆದು ಹಾಲ್‌ಗೆ ಬಂದು ಕೂತೆ. ಈಡೀ ಮನೆ ಕತ್ತಲಾಗಿತ್ತು. ಕ್ಯಾಂಡಲ್ ಹಚ್ಚೋಣ ಅನ್ಕೊಂಡವ್ನು ಬೇಡ ಅನ್ನಿಸಿ ಕೈಲಿದ್ದ ಪ್ಯಾಕೇಟ್ ಓಪನ್ ಮಾಡ್ದೆ... ಆ ಕತ್ತಲ್ಲಲೂ ತಳತಳ ಹೊಳೀತಾ ಇತ್ತು... BMW ಕಾರು. ವಾಹ್ಹ್ ! ಏನೂ ಅಧ್ಭುತ ಫಿನಿಷಿಂಗ್.. ಟಿ.ವಿ ಹತ್ರ ಇದ್ದ ಇನ್ನೊಂದು ಕಾರ್ ತಗೊಂಡು ಎರಡನ್ನು ಸರಿಯಾಗಿ ನಿಲ್ಲಿಸಿ ಎರಡೂ ರಿಮೋಟ್ಗಳನ್ನೂ ಕೈಲಿ ಹಿಡಿದುಕೊಂಡು ರೆಡಿ ಆದೆ... ಒಂದು... ಎರಡೂ... ಮೂರು... ಸೂಂಯ್ ಅಂತ ಮುಂದಕ್ಕೆ ಹೋದವು ಎರಡು ಕಾರುಗಳು...
ಹೌದು ! ಇದೇ ನನ್ನ ಬದುಕು... ಅದಕ್ಕೆನಂತೆ ? ನಮ್ಮ ಮದ್ವೆ ಲೇಟಾಗಿದ್ರೇ ಏನಂತೆ ? ನನ್ನನ್ನ ಯಾರು ಪ್ರೀತಿಸ್ಲಾಂದ್ರೇ ಏನಂತೆ ? ನಮಗೆ ಮಕ್ಕಳಾಗಿಲ್ಲಾಂದ್ರೆ ಏನಂತೆ ? ನಾನು ಲಕ್ಷಾಂತರ ಸಂಪಾದಿಸದಿದ್ರೆ ಏನಂತೆ ? ನನ್ನ ವೃತ್ತಿ ಬದುಕಲ್ಲಿ 'ಪ್ಯಾ ಷ ನ್ನೆ...' ಇಲ್ಲದೇ ಇದ್ರೇ ಏನಂತೆ ? ಇದೇ ನನ್ನ ಬದುಕು... 'ಉಟ್ಟಿಸ್ಕೊಂಡಿದೀನಿ ನಂದೇ ಲೋಕ... ಆ ಲೋಕಾನೇ ಮರ‍್ತು...' ಅಷ್ಟು ಸಾಕು. ಗೋಡೆವರೆಗೂ ಹೋದ ಕಾರು ತಾನೆ ರಿವರ್ಸ್ ತೊಗೊಂಡು ಹಿಂದೆ ತಿರುಗಿತು... ಅದರ ಹೆಡ್ ಲೈಟ್ ಬೆಳಕು ಹಾಲೆಲ್ಲಾ ಹರಡತೊಡಗಿತ್ತು... ಆ ಬೆಳಕಲ್ಲಿ ನಾನು ಮುಖ ತೋಯಿಸಿಕೊಳ್ಳತೊಡಗಿದೆ...
