Wednesday, September 22, 2010

ಆ ಮುಖ... ಈ ಮುಖ



’ಈ ಜಗಾ... ಅಪ್ಪಾ, ಅಮ್ಮನ ಮಗ, ಅಮನೊಳಗೆ ಅಪ್ಪನ ಮೊಗ, ಅಪ್ಪನ ಕತ್ತಿಗೆ ಅಮ್ಮನ ನೊಗ, ನಾ ಅವರ... ಕಂದ.... ಶ್ರೀ...’ ಮೊಬೈಲ್ ರಿಂಗಾಯ್ತು...



ಹಲೋ ! ಹೌದು ನಾನೇ... ಇಂಟರ್ ವ್ಯೂ ಗಾ ? ಬನ್ನಿ... ಬಂದಿದೀರಾ ! ಬನ್ನಿ ಒಳಗೆ... ಇಲ್ಲೇ ಇದೀನಿ.


ಆಕಾರವೊಂದರ ಆಗಮನ.



ಬನ್ನಿ ! ಕೂತ್ಕೊಳ್ಳಿ


ನಮಸ್ಕಾರ ಸಾರ್, ನಮ್ ಪತ್ರಿಕೆಗೆ ನಿಮ್ಮದೊಂದು ಸಂದರ್ಶನ ಬೇಕಾಗಿತ್ತು, ಹೆಚ್ಚು ಸಮಯ ತೊಗೊಳ್ಳೋದಿಲ್ಲಾ


ಪರವಾಗಿಲ್ಲಾ... ಕಡಿಮೆ ತಿಳಕೊಂಡ್ ಹೆಚ್ಚು ಬರೆಯೋ ಜಾಣರು ನೀವು ಅಂತ ಗೊತ್ತು ನಂಗೆ, ಕೇಳಿ


ಸಾರ್, ನೀವು ಈ ಬಿಸಿನೆಸ್‌ಗೆ ಬಂದು ಯಾವಾಗ ಬಂದ್ರಿ ?


ಈಗ ಒಂದೈದು ವರ್ಷದ ಹಿಂದೆ,,, ತುಂಬಾ ಚಿಕ್ಕದಾಗಿ ಶುರು ಮಾಡಿದ್ದು... ಈವತ್ತಿನ ಟರ್ನ್ ಓವರ್ ಕೋಟಿಗಳಲ್ಲಿದೆ


ಸಾರ್-ನಿಮ್ಗೆ ಈ ಬೇರೆಯವರ ಮುಖಾನ ಕೊಂಡು-ಮಾರೋ ಐಡಿಯಾ ಹೊಳೆದಿದ್ದಾದ್ರೂ ಹೇಗೆ ?


ನೋಡಿ, ತುಂಬಾ ಸಿಂಪಲ್, ಮೂಗು-ಕಣ್ಣು-ಹುಬ್ಬು-ಹಲ್ಲು ಎಲ್ಲಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳೋ ಬದಲು ಹೀಗೆ ನಮ್ ಹತ್ರ ತೊಗೊಂಡ್ರೆ ಅವರಿಗೆ ಚೀಪ್ ಆಗಿ ವರ್ಕ ಔಟ್ ಆಗತ್ತೆ ಅನಿಸಿ ಶುರುಮಾಡ್ದೆ


ನೀವು ಕೊಂಡುಕೊಳ್ಳುವಾಗ ಏನೇನೂ ನೋಡಿ ಕೊಳ್ತೀರಾ ಸಾರ್ ?


ಸಾಮಾನ್ಯವಾಗಿ ವ್ಯಕ್ತಿಯ ಹಿನ್ನೆಲೆ ನೋಡ್ತೀವಿ... ಅವನ ವೃತ್ತಿ, ಅಭ್ಯಾಸ-ಹವ್ಯಾಸ ಎಲ್ಲಾ ನೋಡಿ ಡಿಸೈಡ್ ಮಾಡ್ತೀವಿ... ಸದಾ ಹಸನ್ಮುಖಿಯಾಗಿರೋ ಮುಖಗಳಿಗೆ ಡಿಮ್ಯಾಂಡ್ ಜಾಸ್ತಿ... ಪರ್ಸನಾಲಿಟಿ ಡೆವಲಪ್‌ಮೆಂಟ್‌ನವರು, ಎಚ್ಚಾರ್ ಗಳು, ಸೇಲ್ಸ್‌ನವರು ಬಂದು ಕೊಂಡ್ಕೋತಾರೆ


ಓ, ಓಕೆ ! ಸಾರ್ ನಿಮಗೆ ಇವರುಗಳೇನಾ ಕಷ್ಟಮರ‍್ಸ್ ?


ಇವರಷ್ಟೇ ಅಲ್ಲಾ, ಎಲೆಕ್ಷನ್ ಟೈಮಲ್ಲಿ ರಾಜಕಾರಣಿಗಳು ಬಂದು ಎಷ್ಟಾದ್ರೂ ಕೊಟ್ಟು ತಗೊಂಡ್ ಹೋಗ್ತಾರೆ. ಅವರುಗಳದು ತುಂಬಾನೇ ಡ್ಯಾಮೇಜ್ ಆಗಿರತ್ತೆ ನೋಡಿ... ಅದಿಕ್ಕೆ ! ಮೊದಲೆಲ್ಲಾ ಬಂದು ಸ್ವಾಮೀಜಿಗಳ ಶಾಂತ ಮುಖಾನೇ ಕೊಡಿ ಅಂತ ದುಂಬಾಲು ಬೀಳ್ತಿದ್ರೂ... ’ನಿತ್ಯಾನಂದ ಪ್ರಕರಣ’ ಆದ್ಮೇಲೆ ಬಿಟ್ಟಿದಾರೆ.


ಇದೆಲ್ಲಾ ಮಾಡೋಕೆ ನಿಮ್ ನೆಟ್ ವರ್ಕ್ ಏನು ?


ನಮ್ಮದು ಬೆಂಗಳೂರಿನ ಎಲ್ಲಾ ದೊಡ್ಡ ದೊಡ್ಡ ಜ್ಯೋತಿಷ್ಯ ಹೇಳೋವರ ಜೊತೆ ಟೈ ಅಪ್ ಇದೆ, ಈಗ ಹಾಸ್ಪಿಟಲ್‌ಗಳಿಗೆ ಮತ್ತು ಲ್ಯಾಬೋರೆಟರಿಗಳಿಗೆ ಕಮಿಷನ್ ಬೇಸಿಸ್ ಮೇಲೆ ಅಂಡರ್‌ಸ್ಟಾಂಡಿಂಗ್ ಇರತ್ತಲ್ಲಾ... ಹಂಗೆ, ಅವ್ರೂ ನಮಗೆ ರೆಫರೆನ್ಸ್ ಕೊಡ್ತಾರೆ... ಹೆಣ್ಣು ಮಕ್ಕಳ ಪೋಷಕರು ತಮ್ಮ ಮಕ್ಳಿಗೆ ಸಾಫ್ಟ್‌ವೇರ್ ಮುಖಗಳೇ ಬೇಕು ? ಅಂದಾಗ ಇಲ್ಲಿಗೆ ಬರ‍್ತಾರೆ


ನಿಜವಾಗ್ಲೂ ಇನ್ನೊಬ್ಬರ ಮುಖಾನ ನಾವು ಉಪಯೋಗಿಸಬಹುದಾ ?


ಖಂಡಿತಾ, ಈಗ ನಿಮ್ಮ ಮುಖಾನೇ ತೊಗೋಳ್ಳಿ... ನಿಮ್ಮ ಮುಖಾ ನಿಮ್ಮ ಎಡಿಟರ್ ಮುಖಾದ ಹಾಗೇ ಕಾಣೋಲ್ವಾ ಎಷ್ಟೋ ಸಲ.. ಹಾಗೆ, ಅದೂ ಅಲ್ದೆ ನಾನು ಬೆಸಿಕಲ್ಲಿ ನಾನು ಥಿಯೇಟರ್ ಪರ್ಸನ್ನೂ... ಹೆಚ್ಚು-ಕಮ್ಮಿಯಾಗಿದ್ರೆ ’ನೋಸ್ ಕಟ್ಟೋ/ಲಿಪ್ ಕಟ್ಟೋ’ ಮಾಡಿ ಅಡ್ಜಸ್ಟ್ ಮಾಡಿ ಬಿಡ್ತೀನಿ... ಅದು ’ಹೆಂಗೆ ?’ ಅಂತ ಮಾತ್ರ ಕೇಳ್ಬೇಡಿ, ಅದು ಬಿಸಿನೆಸ್ ಸೀಕ್ರೇಟ್


ಸರಿ ! ನಿಮ್ಮ ಈ ಕೆಲಸಕ್ಕೆ ಮನೆಯವರ ಬೆಂಬಲ ಇದ್ಯಾ ?


ಯಾವ ಹೊಸ ವಿಚಾರಕ್ಕೆ ಯಾರ ಮನೆಯಲ್ಲಿ ಬೆಂಬಲ ಕೊಡ್ತಾರೆ ಹೇಳಿ ? ಮೊದಲೆಲ್ಲಾ ವಿರೋಧಿಸಿದ್ರೂ... ನಾನು ಯಾವಾಗ ಬೇರೆ ಬೇರೆ ಮುಖ ಹಾಕ್ಕೊಂಡ್ ಹೋಗಿ ತೋರಿಸಿ ಕನ್ವಿನ್ಸ್ ಮಾಡಿದ್ನೋ ಸುಮ್ಮನಾದ್ರು.


ಸರಿ ಸರ್, ತುಂಬಾ ಇನ್ಫರ‍್ಮೇಷನ್ ಕೊಟ್ರಿ, ಧನ್ಯವಾದಗಳು, ನಾನು ಬರ‍್ತೀನಿ


ಆಗಲಿ, ನಿಮಗೆನಾದ್ರೂ ಮುಖ ಬೇಕಾದ್ರೆ ಹೇಳಿ ಡಿಸ್ಕೌಂಟ್ ರೇಟ್‌ನಲ್ಲಿ ಕೊಡೋಣ.

Wednesday, May 26, 2010

B M W


ಅರೇ ! ಆ ಟಿ.ವಿ ಅಂಗಡಿ ಮುಂದೆ ಅಷ್ಟೊಂದು ಜನಾ ಇದಾರೆ ! ಇವತ್ತು ಮ್ಯಾಚ್ ಕೂಡ ಇಲ್ಲಾ... ಹೊಸ ಸಿನಿಮಾನೂ ರಿಲೀಸ್ ಆಗಿಲ್ಲಾ... ಥೂ ! ಹಾಳಾದ್ ಜನಾ ಕೆಲಸಾ ಇಲ್ದೇ.. ಅಂಗಡಿ ಮುಂದೆ ಗರುಡಗಂಭದ ತರಹ ನಿಂತಿರ‍್ತಾರೆ... ಮತ್ತು ಅವರು ಹಾಗೇ ನಿಂತಾಗೆಲ್ಲಾ ನಾನೂ ಹೋಗಿ ನಿಲ್ಲಬೇಕೂ ಅನ್ನೋ ಆಸೆ ಕಿಬ್ಬೊಟ್ಟೆಯಾಳದಿಂದ ಎದ್ದು ಬಂದು ಕಾಡುತ್ತೆ.. ಸುಡುಗಾಡು ! ನೋಡೇ ಬಿಡೋಣ ಅಂತ ಹೋಗಿ ನಿಂತೆ... ರಷ್ಯನ್ ಹುಡುಗಿ(!)ಯೊಬ್ಬಳು ಪೋಲ್ ಡಾನ್ಸ್ ಮಾಡ್ತಾ ಇದ್ಲು... 52ಇಂಚಿನ ಚಪ್ಪಟೆ ಟಿ.ವಿಯಲ್ಲಿ ಅವಳ ನೀಳಕಾಲುಗಳು ಇನ್ನಷ್ಟು ಮಿರಮಿರನೆ ಮಿಂಚ್ತಾ ಇತ್ತು. ಅವಳು ಇನ್ನೇನು ಕೆಳಗೆ ಕೂರು ಜರ್ಕ್ ಹೊಡಿತಾಳೇ ಅನ್ನೋವಷ್ಟರಲ್ಲಿ ''ಆರೋಗ್ಯದ ರಕ್ಷಣೆಯ ಮಾಡುವುದು ಲೈಫ್ ಬಾಯ್..." ಅಂತ ಆಡ್ ಬರೋಕೆ ಶುರುವಾಯ್ತು. ನೋಡ್ತಿದ್ದವರಲ್ಲಿ ಕೆಲವರು ಉಗುಳು ನುಂಗಿಕೊಂಡು, ಇನ್ನು ಕೆಲವರು ಉಗುಳಿಕೊಂಡು ಹೊರಟರು. ನಾನೂ ಹೊರಡೋಕೆ ಅಂತ ತಿರುಗೋ ಮೊದಲು ಕಾಣಿಸ್ತು. ಅದು.... ಉದ್ದಾನುದ್ದ ರಸ್ತೆಯೊಂದರ ತುದಿಯಿಂದ ಧೊಳೆಬ್ಬಿಸುತ್ತಾ ಬರ‍್ತಾ ಇತ್ತು. ಹೌದು ! ಇದು ಅದೇ ಕಾರು... ಈ ಜಾಹಿರಾತು ಎಷ್ಟು ಸಲ ನೋಡಿಲ್ಲಾ ನಾನು... ಬರ‍್ತಾ ಬರ‍್ತಾ ಸ್ಪೀಡ್ ಜಾಸ್ತಿ ಆಗತ್ತೆ... ಸಡನ್ ಬ್ರೇಕ್ ಹಾಕಿ ಒಂದು ಸೆಮಿ ಸರ್ಕಲ್, ಮತ್ತೊಂದು ಫುಲ್ ಸರ್ಕಲ್ ಹಾಕುತ್ತೆ ಈ ಕಾರು... ಅದರ ಪ್ರತಿ ಮೂಲೆ, ಪ್ರತಿ ಚಲನೆಯ ಪರಿಚಯ ನನಗಿದೆ... ನನ್ನ ಕನಸಿನ ಕಾರು... ಇದೊಂದು ತಗೊಳ್ಳೋಕೆ ಆಗಿಲ್ಲಾ... ಈಗ ಹತ್ರ ಬರತ್ತೆ... ಅದರ ಲೋಗೋ ಈಡೀ ಟಿ.ವಿ ಪರದೆ ತುಂಬಾ ತುಂಬಿಕೊಳ್ಳತ್ತೆ... ಹಾಗೂ ಕೊನೇ ಗಳಿಗೇಲಿ ಆ ಲೋಗೋ ಒಡೆದು ಕಾರು ಚಿಮ್ಮಿ ಬರುತ್ತೆ... ಎಷ್ಟೋ ಸಾರಿ ಕೈ ಚಾಚಿ ಹಿಡಿದುಕೊಳ್ಳೋಣ ಅನ್ನಿಸಿದೆ. ಛೇ ! ಕರೆಂಟ್ ಹೋಯ್ತು... ಇಲ್ಲಾ ಈ ಸಾರಿ ಏನೇ ಆದ್ರೂ ಬಿಡಾಬಾರ‍್ದು... BMWತೊಗೊಂಡೇ ಬಿಡಬೇಕು. ಹೇಗಿದ್ರೂ ಆಫೀಸಲ್ಲಿ ಮಿಕ್ಕವರೆಲ್ಲಾ ಕೆಲ್ಸ ಬಿಟ್ಟು 'ಹಾಳೂರಿಗೆ ಗೌಡ' ಆಗಿದೀನಿ. ಈ ಸಲ ಒಳ್ಳೇ ಕಮೀಷನ್‌ನೇ ಬರಬಹುದು... ಯೋಚಿಸುತ್ತಾ ಲಿಫ್ಟ್ ಏರಿ ಬಾಗಿಲು ಹಾಕ್ಕೊಂಡೆ. ಸ್ವಲ್ಪ ಹೊತ್ತಿಗೆ ಫಸ್ಟ್ ಫ್ಲೋರ್ ಅಂತ ಉಲಿಯಿತು ಲಿಫ್ಟ್. BMWನೂ ಥೇಟ್ ಹೀಗೆ... ಅದಿಕ್ಕೆ ಸರ್ವಿಸೇ ಮಾಡಿಸಬೇಕಾಗಿಲ್ವಂತೆ... ಅದಿಕ್ಕೆ ಸರ್ವಿಸ್ ಯಾವಾಗ ಬೇಕೂ ಅಂತ ಅದೇ ತಿಳಿಸುತ್ತಂತೆ... ನನ್ನ ಟೇಬಲ್ಗೆ ಹೋಗಿ ಕೂತು ಇಂಟರ್‌ಕಾಂಗೆ ಫೋನ್ ಮಾಡಿ ಕೇಳ್ದೆ... ಕಮಿಷನ್ ಹಣ ಬ್ಯಾಂಕಿಗೆ ಹಾಕಾಯ್ತಾ ? ಅಂತ. ಹಣ ಹಾಕಿ ಆಗಿತ್ತು. ಖುಷಿಯಾಯ್ತು... ತುಂಬಾನೆ, ಟಾಯ್ಲಿಟ್ಟಿಗೆ ಪುಷ್ಕಳವಾಗಿ ಉಚ್ಛೆ ಹೂಯ್ದು ಬಂದೆ... ಏನೋ ರಿಲೀಫ್. ಫೋನ್ ಮಾಡಿ ಹೇಳ್ದೆ... "ಚೆಕ್ ಕಳಿಸ್ತಾ ಇದೀನಿ, BMWಬೇಕೂ... ಕಪ್ಪು ಬಣ್ಣದ್ದೇ ಆಗಿರಬೇಕು... ನಾನು ಹೇಳಿದ ದಿನಾನೇ ಡೆಲಿವರಿ ಕೊಡಬೇಕು" ಅಂತ. ತಕ್ಷಣ ಹೆಂಡ್ತಿ ಜ್ಞಾಪ್ಕ ಬಂದ್ಲು. ಆಫೀಸಿಗೆ ಬಂದ ಅರ್ಧಗಂಟೆಯೊಳಗೆ ಅವಳಿಗೆ ಫೋನ್ ಮಾಡೋದು ವರ್ಷಗಟ್ಟಳೆಯಿಂದ ಪಾಲಿಸಿಕೊಂಡು ಬಂದಿರೋ ಪದ್ದತಿ. ಇವತ್ತು ಲೇಟಾಯ್ತು ? ಇಲ್ಲಾ ಇನ್ನೂ ಆರು ನಿಮಿಷ ಇದೆ. ಫೋನ್ ಮಾಡಿ ಹೇಳ್ದೆ "ಅಪ್ಪಿ, ಆಫೀಸ್ ತಲುಪಿದೆ..." ಫೋನ್ ಇಡೋ ಮುಂಚೆ ಅಕ್ಕ ಪಕ್ಕ ನೋಡಿ "ಲವ್ ಯೂ" ಅಂದು ಫೋನ್ ಇಟ್ಟೆ. ಪ್ರೀತಿಯೆಂದರೇ ಇದೇನಾ ??? ನಾನು ಹೀಗೆ ದಿನಾ ತಪ್ಪದೇ ಫೋನು ಮಾಡೋದು ಪ್ರೀತಿಯಿಂದಾನ ಅಥ್ವಾ ಅನುಮಾನದಿಂದಾನಾ ? ಈ ಜಿಜ್ಞಾಸೆ ತುಂಬಾ ಸಲ ಕಾಡಿದೆ... ಇಲ್ಲಾ ಅನುಮಾನ ಇರೋದಿಲ್ಲಾ... ಈ ವಯಸ್ಸಲ್ಲಿ ನಾವು ಒಬ್ಬರಿಗೊಬ್ಬರು ಅವಶ್ಯಕತೆ ಆಗೋಗಿದೀವಿ, ಮಕ್ಕಳಿದ್ದಿದ್ದಿದ್ರೆ ಅ ಮಾತು ಬೇರೆ... ನಮಗೇ ಮಕ್ಳಿಲ್ಲಾ... ಇದೊಂದು ವಿಷ್ಯಕ್ಕೆ ಅದೆಷ್ಟು ಜನಾ ಅದೆಷ್ಟು ರೀತಿ ಕಾಡಿಸಿದಾರೆ... "ಲೇಟಾಗಿ ಮದ್ವೆಯಾಗಿದ್ದಕ್ಕೆ ಹೀಗೆ ಆಗಿರ‍್ಬೇಕು... ಒಂದು ಮಗೂನಾ ಯಾಕೆ ದತ್ತು ತಗೋ ಬಾರದು... ಅಶ್ವಿನಿ ಹೋಮಿಯೋ ಕ್ಲಿನಿಕ್‌ಗೆ ಹೋಗ್ರೀ... ಖಂಡಿತಾ ಮಕ್ಳಾಗುತ್ತೇ... ಇಬ್ರಲ್ಲಿ ಯಾರಿಗಂತೆ ಪ್ರಾಬ್ಲಂ ?" ಪ್ರಶ್ನೆಗಳ ಸುರಿ ಮಳೆ ಮೊದ್ಲು ಧಾರಾಕಾರವಾಗಿ ಬೀಳ್ತಾ ಇದ್ದದ್ದು ದಿನಾ ಕಳೆದಂತೆ ಕಡಿಮೆಯಾಗಿ ಈಗ ಆಗೊಮ್ಮೆ-ಈಗೊಮ್ಮೆ ಬೀಳುತ್ತೆ. ಆದ್ರೆ ನನ್ನ ಹೆಂಡ್ತಿ ಒಂದು ದಿನಾನೂ ಈ ಬಗ್ಗೆ ಉಸಿರೆತ್ತಿಲ್ಲಾ... ಇದಿಕ್ಕೇ ನೀವೇ ಕಾರಣ ಅಂತ ದೂಷಿಸಿಲ್ಲ... ನಾನೇ ಕಾರಣ ಅಂತಾನೂ ಹೇಳಿಲ್ಲಾ... ನಾನೂ ಅಷ್ಟೇ... ಹಾಗಾಗೆ ಪರಸ್ಪರ ಗೌರವ ಹುಟ್ಟಿದೆ... ಇದೆಲ್ಲಾ ಆದ ಮೇಲೇನೆ ಈ ಕಾರ್ ಕ್ರೇಜ್ ಶುರುವಾಗಿದ್ದು... ಶುಕ್ರವಾರ ತೊಗೊಳ್ಳೋಣ ಡೆಲಿವರಿ... ಮಿಕ್ಕೆಲ್ಲಾ ಕಾರುಗಳನ್ನೂ ಶುಕ್ರವಾರನೇ ತಂದಿದ್ದು... ರಾಹುಕಾಲ ಎಷ್ಟು ಹೊತ್ತಿಗೋ ನೋಡಬೇಕೂ... ಕಡೆಗೂ ಶುಕ್ರವಾರ ಬಂದೇ ಬಿಡ್ತು... ಆಫೀಸಲ್ಲಿ ಅವತ್ತೇ ವಿಪರೀತ ಕೆಲ್ಸಾ... ಮನೆಯಿಂದ ಫೋನ್ ಬಂತು "ಡೆಲಿವರಿ ಬಂತೂ" ಅಂತ. ಕೆಲಸದಲ್ಲಿ ಮನಸ್ಸು ನಿಲ್ತಾನೇ ಇಲ್ಲಾ... ಯಾವಾಗ ಮನೆಗೆ ಹೋಗ್ತಿನೋ ಅಂತ... ಆಫೀಸಿಂದ ಹೊರಟಾಗ ರಾತ್ರಿ 9 ಗಂಟೆ... ಮನೆ ತಲುಪೋವಷ್ಟರಲ್ಲಿ ಲೈಟ್‌ಗಳೆಲ್ಲಾ ಆಫ್ ಆಗಿದ್ವು... ಮಾತ್ರೆ ತಗೋಳ್ಳೊದ್ರಿಂದ ಅವ್ಳು ರಾತ್ರಿ ಬೇಗ ಮಲಗ್ತಾಳೆ... ನನ್ನ ಹತ್ರ ಇದ್ದ ಕೀ ಯಿಂದ ಡೋರ್ ಓಪನ್ ಮಾಡಿ ಒಳಹೋಗಿ ಕೂತೆ... ಫ್ರಿಡ್ಜ್ ಓಪನ್ ಮಾಡ್ದೆ... ಯಾಕೋ ಏನೂ ಬೇಡವೆನ್ನಿಸಿ ನೀರು ಮಾತ್ರ ಕುಡಿದೆ... ರೂಮಲ್ಲಿ ಅವ್ಳು ಮಲಗಿರೋದು ಕಾಣಿಸ್ತು... ಸದ್ದಾಗದೆ ಹತ್ತಿರ ಹೋಗಿ ಕಾಟ್ ಕೆಳಗಿರೋ ಪ್ಯಾಕೆಟ್ ಹೊರ ತೆಗೆದು ಹಾಲ್‌ಗೆ ಬಂದು ಕೂತೆ. ಈಡೀ ಮನೆ ಕತ್ತಲಾಗಿತ್ತು. ಕ್ಯಾಂಡಲ್ ಹಚ್ಚೋಣ ಅನ್ಕೊಂಡವ್ನು ಬೇಡ ಅನ್ನಿಸಿ ಕೈಲಿದ್ದ ಪ್ಯಾಕೇಟ್ ಓಪನ್ ಮಾಡ್ದೆ... ಆ ಕತ್ತಲ್ಲಲೂ ತಳತಳ ಹೊಳೀತಾ ಇತ್ತು... BMW ಕಾರು. ವಾಹ್ಹ್ ! ಏನೂ ಅಧ್ಭುತ ಫಿನಿಷಿಂಗ್.. ಟಿ.ವಿ ಹತ್ರ ಇದ್ದ ಇನ್ನೊಂದು ಕಾರ್ ತಗೊಂಡು ಎರಡನ್ನು ಸರಿಯಾಗಿ ನಿಲ್ಲಿಸಿ ಎರಡೂ ರಿಮೋಟ್ಗಳನ್ನೂ ಕೈಲಿ ಹಿಡಿದುಕೊಂಡು ರೆಡಿ ಆದೆ... ಒಂದು... ಎರಡೂ... ಮೂರು... ಸೂಂಯ್ ಅಂತ ಮುಂದಕ್ಕೆ ಹೋದವು ಎರಡು ಕಾರುಗಳು...
ಹೌದು ! ಇದೇ ನನ್ನ ಬದುಕು... ಅದಕ್ಕೆನಂತೆ ? ನಮ್ಮ ಮದ್ವೆ ಲೇಟಾಗಿದ್ರೇ ಏನಂತೆ ? ನನ್ನನ್ನ ಯಾರು ಪ್ರೀತಿಸ್ಲಾಂದ್ರೇ ಏನಂತೆ ? ನಮಗೆ ಮಕ್ಕಳಾಗಿಲ್ಲಾಂದ್ರೆ ಏನಂತೆ ? ನಾನು ಲಕ್ಷಾಂತರ ಸಂಪಾದಿಸದಿದ್ರೆ ಏನಂತೆ ? ನನ್ನ ವೃತ್ತಿ ಬದುಕಲ್ಲಿ 'ಪ್ಯಾ ಷ ನ್ನೆ...' ಇಲ್ಲದೇ ಇದ್ರೇ ಏನಂತೆ ? ಇದೇ ನನ್ನ ಬದುಕು... 'ಉಟ್ಟಿಸ್ಕೊಂಡಿದೀನಿ ನಂದೇ ಲೋಕ... ಆ ಲೋಕಾನೇ ಮರ‍್ತು...' ಅಷ್ಟು ಸಾಕು. ಗೋಡೆವರೆಗೂ ಹೋದ ಕಾರು ತಾನೆ ರಿವರ್ಸ್ ತೊಗೊಂಡು ಹಿಂದೆ ತಿರುಗಿತು... ಅದರ ಹೆಡ್ ಲೈಟ್ ಬೆಳಕು ಹಾಲೆಲ್ಲಾ ಹರಡತೊಡಗಿತ್ತು... ಆ ಬೆಳಕಲ್ಲಿ ನಾನು ಮುಖ ತೋಯಿಸಿಕೊಳ್ಳತೊಡಗಿದೆ...