Wednesday, September 22, 2010

ಆ ಮುಖ... ಈ ಮುಖ



’ಈ ಜಗಾ... ಅಪ್ಪಾ, ಅಮ್ಮನ ಮಗ, ಅಮನೊಳಗೆ ಅಪ್ಪನ ಮೊಗ, ಅಪ್ಪನ ಕತ್ತಿಗೆ ಅಮ್ಮನ ನೊಗ, ನಾ ಅವರ... ಕಂದ.... ಶ್ರೀ...’ ಮೊಬೈಲ್ ರಿಂಗಾಯ್ತು...



ಹಲೋ ! ಹೌದು ನಾನೇ... ಇಂಟರ್ ವ್ಯೂ ಗಾ ? ಬನ್ನಿ... ಬಂದಿದೀರಾ ! ಬನ್ನಿ ಒಳಗೆ... ಇಲ್ಲೇ ಇದೀನಿ.


ಆಕಾರವೊಂದರ ಆಗಮನ.



ಬನ್ನಿ ! ಕೂತ್ಕೊಳ್ಳಿ


ನಮಸ್ಕಾರ ಸಾರ್, ನಮ್ ಪತ್ರಿಕೆಗೆ ನಿಮ್ಮದೊಂದು ಸಂದರ್ಶನ ಬೇಕಾಗಿತ್ತು, ಹೆಚ್ಚು ಸಮಯ ತೊಗೊಳ್ಳೋದಿಲ್ಲಾ


ಪರವಾಗಿಲ್ಲಾ... ಕಡಿಮೆ ತಿಳಕೊಂಡ್ ಹೆಚ್ಚು ಬರೆಯೋ ಜಾಣರು ನೀವು ಅಂತ ಗೊತ್ತು ನಂಗೆ, ಕೇಳಿ


ಸಾರ್, ನೀವು ಈ ಬಿಸಿನೆಸ್‌ಗೆ ಬಂದು ಯಾವಾಗ ಬಂದ್ರಿ ?


ಈಗ ಒಂದೈದು ವರ್ಷದ ಹಿಂದೆ,,, ತುಂಬಾ ಚಿಕ್ಕದಾಗಿ ಶುರು ಮಾಡಿದ್ದು... ಈವತ್ತಿನ ಟರ್ನ್ ಓವರ್ ಕೋಟಿಗಳಲ್ಲಿದೆ


ಸಾರ್-ನಿಮ್ಗೆ ಈ ಬೇರೆಯವರ ಮುಖಾನ ಕೊಂಡು-ಮಾರೋ ಐಡಿಯಾ ಹೊಳೆದಿದ್ದಾದ್ರೂ ಹೇಗೆ ?


ನೋಡಿ, ತುಂಬಾ ಸಿಂಪಲ್, ಮೂಗು-ಕಣ್ಣು-ಹುಬ್ಬು-ಹಲ್ಲು ಎಲ್ಲಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳೋ ಬದಲು ಹೀಗೆ ನಮ್ ಹತ್ರ ತೊಗೊಂಡ್ರೆ ಅವರಿಗೆ ಚೀಪ್ ಆಗಿ ವರ್ಕ ಔಟ್ ಆಗತ್ತೆ ಅನಿಸಿ ಶುರುಮಾಡ್ದೆ


ನೀವು ಕೊಂಡುಕೊಳ್ಳುವಾಗ ಏನೇನೂ ನೋಡಿ ಕೊಳ್ತೀರಾ ಸಾರ್ ?


ಸಾಮಾನ್ಯವಾಗಿ ವ್ಯಕ್ತಿಯ ಹಿನ್ನೆಲೆ ನೋಡ್ತೀವಿ... ಅವನ ವೃತ್ತಿ, ಅಭ್ಯಾಸ-ಹವ್ಯಾಸ ಎಲ್ಲಾ ನೋಡಿ ಡಿಸೈಡ್ ಮಾಡ್ತೀವಿ... ಸದಾ ಹಸನ್ಮುಖಿಯಾಗಿರೋ ಮುಖಗಳಿಗೆ ಡಿಮ್ಯಾಂಡ್ ಜಾಸ್ತಿ... ಪರ್ಸನಾಲಿಟಿ ಡೆವಲಪ್‌ಮೆಂಟ್‌ನವರು, ಎಚ್ಚಾರ್ ಗಳು, ಸೇಲ್ಸ್‌ನವರು ಬಂದು ಕೊಂಡ್ಕೋತಾರೆ


ಓ, ಓಕೆ ! ಸಾರ್ ನಿಮಗೆ ಇವರುಗಳೇನಾ ಕಷ್ಟಮರ‍್ಸ್ ?


ಇವರಷ್ಟೇ ಅಲ್ಲಾ, ಎಲೆಕ್ಷನ್ ಟೈಮಲ್ಲಿ ರಾಜಕಾರಣಿಗಳು ಬಂದು ಎಷ್ಟಾದ್ರೂ ಕೊಟ್ಟು ತಗೊಂಡ್ ಹೋಗ್ತಾರೆ. ಅವರುಗಳದು ತುಂಬಾನೇ ಡ್ಯಾಮೇಜ್ ಆಗಿರತ್ತೆ ನೋಡಿ... ಅದಿಕ್ಕೆ ! ಮೊದಲೆಲ್ಲಾ ಬಂದು ಸ್ವಾಮೀಜಿಗಳ ಶಾಂತ ಮುಖಾನೇ ಕೊಡಿ ಅಂತ ದುಂಬಾಲು ಬೀಳ್ತಿದ್ರೂ... ’ನಿತ್ಯಾನಂದ ಪ್ರಕರಣ’ ಆದ್ಮೇಲೆ ಬಿಟ್ಟಿದಾರೆ.


ಇದೆಲ್ಲಾ ಮಾಡೋಕೆ ನಿಮ್ ನೆಟ್ ವರ್ಕ್ ಏನು ?


ನಮ್ಮದು ಬೆಂಗಳೂರಿನ ಎಲ್ಲಾ ದೊಡ್ಡ ದೊಡ್ಡ ಜ್ಯೋತಿಷ್ಯ ಹೇಳೋವರ ಜೊತೆ ಟೈ ಅಪ್ ಇದೆ, ಈಗ ಹಾಸ್ಪಿಟಲ್‌ಗಳಿಗೆ ಮತ್ತು ಲ್ಯಾಬೋರೆಟರಿಗಳಿಗೆ ಕಮಿಷನ್ ಬೇಸಿಸ್ ಮೇಲೆ ಅಂಡರ್‌ಸ್ಟಾಂಡಿಂಗ್ ಇರತ್ತಲ್ಲಾ... ಹಂಗೆ, ಅವ್ರೂ ನಮಗೆ ರೆಫರೆನ್ಸ್ ಕೊಡ್ತಾರೆ... ಹೆಣ್ಣು ಮಕ್ಕಳ ಪೋಷಕರು ತಮ್ಮ ಮಕ್ಳಿಗೆ ಸಾಫ್ಟ್‌ವೇರ್ ಮುಖಗಳೇ ಬೇಕು ? ಅಂದಾಗ ಇಲ್ಲಿಗೆ ಬರ‍್ತಾರೆ


ನಿಜವಾಗ್ಲೂ ಇನ್ನೊಬ್ಬರ ಮುಖಾನ ನಾವು ಉಪಯೋಗಿಸಬಹುದಾ ?


ಖಂಡಿತಾ, ಈಗ ನಿಮ್ಮ ಮುಖಾನೇ ತೊಗೋಳ್ಳಿ... ನಿಮ್ಮ ಮುಖಾ ನಿಮ್ಮ ಎಡಿಟರ್ ಮುಖಾದ ಹಾಗೇ ಕಾಣೋಲ್ವಾ ಎಷ್ಟೋ ಸಲ.. ಹಾಗೆ, ಅದೂ ಅಲ್ದೆ ನಾನು ಬೆಸಿಕಲ್ಲಿ ನಾನು ಥಿಯೇಟರ್ ಪರ್ಸನ್ನೂ... ಹೆಚ್ಚು-ಕಮ್ಮಿಯಾಗಿದ್ರೆ ’ನೋಸ್ ಕಟ್ಟೋ/ಲಿಪ್ ಕಟ್ಟೋ’ ಮಾಡಿ ಅಡ್ಜಸ್ಟ್ ಮಾಡಿ ಬಿಡ್ತೀನಿ... ಅದು ’ಹೆಂಗೆ ?’ ಅಂತ ಮಾತ್ರ ಕೇಳ್ಬೇಡಿ, ಅದು ಬಿಸಿನೆಸ್ ಸೀಕ್ರೇಟ್


ಸರಿ ! ನಿಮ್ಮ ಈ ಕೆಲಸಕ್ಕೆ ಮನೆಯವರ ಬೆಂಬಲ ಇದ್ಯಾ ?


ಯಾವ ಹೊಸ ವಿಚಾರಕ್ಕೆ ಯಾರ ಮನೆಯಲ್ಲಿ ಬೆಂಬಲ ಕೊಡ್ತಾರೆ ಹೇಳಿ ? ಮೊದಲೆಲ್ಲಾ ವಿರೋಧಿಸಿದ್ರೂ... ನಾನು ಯಾವಾಗ ಬೇರೆ ಬೇರೆ ಮುಖ ಹಾಕ್ಕೊಂಡ್ ಹೋಗಿ ತೋರಿಸಿ ಕನ್ವಿನ್ಸ್ ಮಾಡಿದ್ನೋ ಸುಮ್ಮನಾದ್ರು.


ಸರಿ ಸರ್, ತುಂಬಾ ಇನ್ಫರ‍್ಮೇಷನ್ ಕೊಟ್ರಿ, ಧನ್ಯವಾದಗಳು, ನಾನು ಬರ‍್ತೀನಿ


ಆಗಲಿ, ನಿಮಗೆನಾದ್ರೂ ಮುಖ ಬೇಕಾದ್ರೆ ಹೇಳಿ ಡಿಸ್ಕೌಂಟ್ ರೇಟ್‌ನಲ್ಲಿ ಕೊಡೋಣ.

Wednesday, May 26, 2010

B M W


ಅರೇ ! ಆ ಟಿ.ವಿ ಅಂಗಡಿ ಮುಂದೆ ಅಷ್ಟೊಂದು ಜನಾ ಇದಾರೆ ! ಇವತ್ತು ಮ್ಯಾಚ್ ಕೂಡ ಇಲ್ಲಾ... ಹೊಸ ಸಿನಿಮಾನೂ ರಿಲೀಸ್ ಆಗಿಲ್ಲಾ... ಥೂ ! ಹಾಳಾದ್ ಜನಾ ಕೆಲಸಾ ಇಲ್ದೇ.. ಅಂಗಡಿ ಮುಂದೆ ಗರುಡಗಂಭದ ತರಹ ನಿಂತಿರ‍್ತಾರೆ... ಮತ್ತು ಅವರು ಹಾಗೇ ನಿಂತಾಗೆಲ್ಲಾ ನಾನೂ ಹೋಗಿ ನಿಲ್ಲಬೇಕೂ ಅನ್ನೋ ಆಸೆ ಕಿಬ್ಬೊಟ್ಟೆಯಾಳದಿಂದ ಎದ್ದು ಬಂದು ಕಾಡುತ್ತೆ.. ಸುಡುಗಾಡು ! ನೋಡೇ ಬಿಡೋಣ ಅಂತ ಹೋಗಿ ನಿಂತೆ... ರಷ್ಯನ್ ಹುಡುಗಿ(!)ಯೊಬ್ಬಳು ಪೋಲ್ ಡಾನ್ಸ್ ಮಾಡ್ತಾ ಇದ್ಲು... 52ಇಂಚಿನ ಚಪ್ಪಟೆ ಟಿ.ವಿಯಲ್ಲಿ ಅವಳ ನೀಳಕಾಲುಗಳು ಇನ್ನಷ್ಟು ಮಿರಮಿರನೆ ಮಿಂಚ್ತಾ ಇತ್ತು. ಅವಳು ಇನ್ನೇನು ಕೆಳಗೆ ಕೂರು ಜರ್ಕ್ ಹೊಡಿತಾಳೇ ಅನ್ನೋವಷ್ಟರಲ್ಲಿ ''ಆರೋಗ್ಯದ ರಕ್ಷಣೆಯ ಮಾಡುವುದು ಲೈಫ್ ಬಾಯ್..." ಅಂತ ಆಡ್ ಬರೋಕೆ ಶುರುವಾಯ್ತು. ನೋಡ್ತಿದ್ದವರಲ್ಲಿ ಕೆಲವರು ಉಗುಳು ನುಂಗಿಕೊಂಡು, ಇನ್ನು ಕೆಲವರು ಉಗುಳಿಕೊಂಡು ಹೊರಟರು. ನಾನೂ ಹೊರಡೋಕೆ ಅಂತ ತಿರುಗೋ ಮೊದಲು ಕಾಣಿಸ್ತು. ಅದು.... ಉದ್ದಾನುದ್ದ ರಸ್ತೆಯೊಂದರ ತುದಿಯಿಂದ ಧೊಳೆಬ್ಬಿಸುತ್ತಾ ಬರ‍್ತಾ ಇತ್ತು. ಹೌದು ! ಇದು ಅದೇ ಕಾರು... ಈ ಜಾಹಿರಾತು ಎಷ್ಟು ಸಲ ನೋಡಿಲ್ಲಾ ನಾನು... ಬರ‍್ತಾ ಬರ‍್ತಾ ಸ್ಪೀಡ್ ಜಾಸ್ತಿ ಆಗತ್ತೆ... ಸಡನ್ ಬ್ರೇಕ್ ಹಾಕಿ ಒಂದು ಸೆಮಿ ಸರ್ಕಲ್, ಮತ್ತೊಂದು ಫುಲ್ ಸರ್ಕಲ್ ಹಾಕುತ್ತೆ ಈ ಕಾರು... ಅದರ ಪ್ರತಿ ಮೂಲೆ, ಪ್ರತಿ ಚಲನೆಯ ಪರಿಚಯ ನನಗಿದೆ... ನನ್ನ ಕನಸಿನ ಕಾರು... ಇದೊಂದು ತಗೊಳ್ಳೋಕೆ ಆಗಿಲ್ಲಾ... ಈಗ ಹತ್ರ ಬರತ್ತೆ... ಅದರ ಲೋಗೋ ಈಡೀ ಟಿ.ವಿ ಪರದೆ ತುಂಬಾ ತುಂಬಿಕೊಳ್ಳತ್ತೆ... ಹಾಗೂ ಕೊನೇ ಗಳಿಗೇಲಿ ಆ ಲೋಗೋ ಒಡೆದು ಕಾರು ಚಿಮ್ಮಿ ಬರುತ್ತೆ... ಎಷ್ಟೋ ಸಾರಿ ಕೈ ಚಾಚಿ ಹಿಡಿದುಕೊಳ್ಳೋಣ ಅನ್ನಿಸಿದೆ. ಛೇ ! ಕರೆಂಟ್ ಹೋಯ್ತು... ಇಲ್ಲಾ ಈ ಸಾರಿ ಏನೇ ಆದ್ರೂ ಬಿಡಾಬಾರ‍್ದು... BMWತೊಗೊಂಡೇ ಬಿಡಬೇಕು. ಹೇಗಿದ್ರೂ ಆಫೀಸಲ್ಲಿ ಮಿಕ್ಕವರೆಲ್ಲಾ ಕೆಲ್ಸ ಬಿಟ್ಟು 'ಹಾಳೂರಿಗೆ ಗೌಡ' ಆಗಿದೀನಿ. ಈ ಸಲ ಒಳ್ಳೇ ಕಮೀಷನ್‌ನೇ ಬರಬಹುದು... ಯೋಚಿಸುತ್ತಾ ಲಿಫ್ಟ್ ಏರಿ ಬಾಗಿಲು ಹಾಕ್ಕೊಂಡೆ. ಸ್ವಲ್ಪ ಹೊತ್ತಿಗೆ ಫಸ್ಟ್ ಫ್ಲೋರ್ ಅಂತ ಉಲಿಯಿತು ಲಿಫ್ಟ್. BMWನೂ ಥೇಟ್ ಹೀಗೆ... ಅದಿಕ್ಕೆ ಸರ್ವಿಸೇ ಮಾಡಿಸಬೇಕಾಗಿಲ್ವಂತೆ... ಅದಿಕ್ಕೆ ಸರ್ವಿಸ್ ಯಾವಾಗ ಬೇಕೂ ಅಂತ ಅದೇ ತಿಳಿಸುತ್ತಂತೆ... ನನ್ನ ಟೇಬಲ್ಗೆ ಹೋಗಿ ಕೂತು ಇಂಟರ್‌ಕಾಂಗೆ ಫೋನ್ ಮಾಡಿ ಕೇಳ್ದೆ... ಕಮಿಷನ್ ಹಣ ಬ್ಯಾಂಕಿಗೆ ಹಾಕಾಯ್ತಾ ? ಅಂತ. ಹಣ ಹಾಕಿ ಆಗಿತ್ತು. ಖುಷಿಯಾಯ್ತು... ತುಂಬಾನೆ, ಟಾಯ್ಲಿಟ್ಟಿಗೆ ಪುಷ್ಕಳವಾಗಿ ಉಚ್ಛೆ ಹೂಯ್ದು ಬಂದೆ... ಏನೋ ರಿಲೀಫ್. ಫೋನ್ ಮಾಡಿ ಹೇಳ್ದೆ... "ಚೆಕ್ ಕಳಿಸ್ತಾ ಇದೀನಿ, BMWಬೇಕೂ... ಕಪ್ಪು ಬಣ್ಣದ್ದೇ ಆಗಿರಬೇಕು... ನಾನು ಹೇಳಿದ ದಿನಾನೇ ಡೆಲಿವರಿ ಕೊಡಬೇಕು" ಅಂತ. ತಕ್ಷಣ ಹೆಂಡ್ತಿ ಜ್ಞಾಪ್ಕ ಬಂದ್ಲು. ಆಫೀಸಿಗೆ ಬಂದ ಅರ್ಧಗಂಟೆಯೊಳಗೆ ಅವಳಿಗೆ ಫೋನ್ ಮಾಡೋದು ವರ್ಷಗಟ್ಟಳೆಯಿಂದ ಪಾಲಿಸಿಕೊಂಡು ಬಂದಿರೋ ಪದ್ದತಿ. ಇವತ್ತು ಲೇಟಾಯ್ತು ? ಇಲ್ಲಾ ಇನ್ನೂ ಆರು ನಿಮಿಷ ಇದೆ. ಫೋನ್ ಮಾಡಿ ಹೇಳ್ದೆ "ಅಪ್ಪಿ, ಆಫೀಸ್ ತಲುಪಿದೆ..." ಫೋನ್ ಇಡೋ ಮುಂಚೆ ಅಕ್ಕ ಪಕ್ಕ ನೋಡಿ "ಲವ್ ಯೂ" ಅಂದು ಫೋನ್ ಇಟ್ಟೆ. ಪ್ರೀತಿಯೆಂದರೇ ಇದೇನಾ ??? ನಾನು ಹೀಗೆ ದಿನಾ ತಪ್ಪದೇ ಫೋನು ಮಾಡೋದು ಪ್ರೀತಿಯಿಂದಾನ ಅಥ್ವಾ ಅನುಮಾನದಿಂದಾನಾ ? ಈ ಜಿಜ್ಞಾಸೆ ತುಂಬಾ ಸಲ ಕಾಡಿದೆ... ಇಲ್ಲಾ ಅನುಮಾನ ಇರೋದಿಲ್ಲಾ... ಈ ವಯಸ್ಸಲ್ಲಿ ನಾವು ಒಬ್ಬರಿಗೊಬ್ಬರು ಅವಶ್ಯಕತೆ ಆಗೋಗಿದೀವಿ, ಮಕ್ಕಳಿದ್ದಿದ್ದಿದ್ರೆ ಅ ಮಾತು ಬೇರೆ... ನಮಗೇ ಮಕ್ಳಿಲ್ಲಾ... ಇದೊಂದು ವಿಷ್ಯಕ್ಕೆ ಅದೆಷ್ಟು ಜನಾ ಅದೆಷ್ಟು ರೀತಿ ಕಾಡಿಸಿದಾರೆ... "ಲೇಟಾಗಿ ಮದ್ವೆಯಾಗಿದ್ದಕ್ಕೆ ಹೀಗೆ ಆಗಿರ‍್ಬೇಕು... ಒಂದು ಮಗೂನಾ ಯಾಕೆ ದತ್ತು ತಗೋ ಬಾರದು... ಅಶ್ವಿನಿ ಹೋಮಿಯೋ ಕ್ಲಿನಿಕ್‌ಗೆ ಹೋಗ್ರೀ... ಖಂಡಿತಾ ಮಕ್ಳಾಗುತ್ತೇ... ಇಬ್ರಲ್ಲಿ ಯಾರಿಗಂತೆ ಪ್ರಾಬ್ಲಂ ?" ಪ್ರಶ್ನೆಗಳ ಸುರಿ ಮಳೆ ಮೊದ್ಲು ಧಾರಾಕಾರವಾಗಿ ಬೀಳ್ತಾ ಇದ್ದದ್ದು ದಿನಾ ಕಳೆದಂತೆ ಕಡಿಮೆಯಾಗಿ ಈಗ ಆಗೊಮ್ಮೆ-ಈಗೊಮ್ಮೆ ಬೀಳುತ್ತೆ. ಆದ್ರೆ ನನ್ನ ಹೆಂಡ್ತಿ ಒಂದು ದಿನಾನೂ ಈ ಬಗ್ಗೆ ಉಸಿರೆತ್ತಿಲ್ಲಾ... ಇದಿಕ್ಕೇ ನೀವೇ ಕಾರಣ ಅಂತ ದೂಷಿಸಿಲ್ಲ... ನಾನೇ ಕಾರಣ ಅಂತಾನೂ ಹೇಳಿಲ್ಲಾ... ನಾನೂ ಅಷ್ಟೇ... ಹಾಗಾಗೆ ಪರಸ್ಪರ ಗೌರವ ಹುಟ್ಟಿದೆ... ಇದೆಲ್ಲಾ ಆದ ಮೇಲೇನೆ ಈ ಕಾರ್ ಕ್ರೇಜ್ ಶುರುವಾಗಿದ್ದು... ಶುಕ್ರವಾರ ತೊಗೊಳ್ಳೋಣ ಡೆಲಿವರಿ... ಮಿಕ್ಕೆಲ್ಲಾ ಕಾರುಗಳನ್ನೂ ಶುಕ್ರವಾರನೇ ತಂದಿದ್ದು... ರಾಹುಕಾಲ ಎಷ್ಟು ಹೊತ್ತಿಗೋ ನೋಡಬೇಕೂ... ಕಡೆಗೂ ಶುಕ್ರವಾರ ಬಂದೇ ಬಿಡ್ತು... ಆಫೀಸಲ್ಲಿ ಅವತ್ತೇ ವಿಪರೀತ ಕೆಲ್ಸಾ... ಮನೆಯಿಂದ ಫೋನ್ ಬಂತು "ಡೆಲಿವರಿ ಬಂತೂ" ಅಂತ. ಕೆಲಸದಲ್ಲಿ ಮನಸ್ಸು ನಿಲ್ತಾನೇ ಇಲ್ಲಾ... ಯಾವಾಗ ಮನೆಗೆ ಹೋಗ್ತಿನೋ ಅಂತ... ಆಫೀಸಿಂದ ಹೊರಟಾಗ ರಾತ್ರಿ 9 ಗಂಟೆ... ಮನೆ ತಲುಪೋವಷ್ಟರಲ್ಲಿ ಲೈಟ್‌ಗಳೆಲ್ಲಾ ಆಫ್ ಆಗಿದ್ವು... ಮಾತ್ರೆ ತಗೋಳ್ಳೊದ್ರಿಂದ ಅವ್ಳು ರಾತ್ರಿ ಬೇಗ ಮಲಗ್ತಾಳೆ... ನನ್ನ ಹತ್ರ ಇದ್ದ ಕೀ ಯಿಂದ ಡೋರ್ ಓಪನ್ ಮಾಡಿ ಒಳಹೋಗಿ ಕೂತೆ... ಫ್ರಿಡ್ಜ್ ಓಪನ್ ಮಾಡ್ದೆ... ಯಾಕೋ ಏನೂ ಬೇಡವೆನ್ನಿಸಿ ನೀರು ಮಾತ್ರ ಕುಡಿದೆ... ರೂಮಲ್ಲಿ ಅವ್ಳು ಮಲಗಿರೋದು ಕಾಣಿಸ್ತು... ಸದ್ದಾಗದೆ ಹತ್ತಿರ ಹೋಗಿ ಕಾಟ್ ಕೆಳಗಿರೋ ಪ್ಯಾಕೆಟ್ ಹೊರ ತೆಗೆದು ಹಾಲ್‌ಗೆ ಬಂದು ಕೂತೆ. ಈಡೀ ಮನೆ ಕತ್ತಲಾಗಿತ್ತು. ಕ್ಯಾಂಡಲ್ ಹಚ್ಚೋಣ ಅನ್ಕೊಂಡವ್ನು ಬೇಡ ಅನ್ನಿಸಿ ಕೈಲಿದ್ದ ಪ್ಯಾಕೇಟ್ ಓಪನ್ ಮಾಡ್ದೆ... ಆ ಕತ್ತಲ್ಲಲೂ ತಳತಳ ಹೊಳೀತಾ ಇತ್ತು... BMW ಕಾರು. ವಾಹ್ಹ್ ! ಏನೂ ಅಧ್ಭುತ ಫಿನಿಷಿಂಗ್.. ಟಿ.ವಿ ಹತ್ರ ಇದ್ದ ಇನ್ನೊಂದು ಕಾರ್ ತಗೊಂಡು ಎರಡನ್ನು ಸರಿಯಾಗಿ ನಿಲ್ಲಿಸಿ ಎರಡೂ ರಿಮೋಟ್ಗಳನ್ನೂ ಕೈಲಿ ಹಿಡಿದುಕೊಂಡು ರೆಡಿ ಆದೆ... ಒಂದು... ಎರಡೂ... ಮೂರು... ಸೂಂಯ್ ಅಂತ ಮುಂದಕ್ಕೆ ಹೋದವು ಎರಡು ಕಾರುಗಳು...
ಹೌದು ! ಇದೇ ನನ್ನ ಬದುಕು... ಅದಕ್ಕೆನಂತೆ ? ನಮ್ಮ ಮದ್ವೆ ಲೇಟಾಗಿದ್ರೇ ಏನಂತೆ ? ನನ್ನನ್ನ ಯಾರು ಪ್ರೀತಿಸ್ಲಾಂದ್ರೇ ಏನಂತೆ ? ನಮಗೆ ಮಕ್ಕಳಾಗಿಲ್ಲಾಂದ್ರೆ ಏನಂತೆ ? ನಾನು ಲಕ್ಷಾಂತರ ಸಂಪಾದಿಸದಿದ್ರೆ ಏನಂತೆ ? ನನ್ನ ವೃತ್ತಿ ಬದುಕಲ್ಲಿ 'ಪ್ಯಾ ಷ ನ್ನೆ...' ಇಲ್ಲದೇ ಇದ್ರೇ ಏನಂತೆ ? ಇದೇ ನನ್ನ ಬದುಕು... 'ಉಟ್ಟಿಸ್ಕೊಂಡಿದೀನಿ ನಂದೇ ಲೋಕ... ಆ ಲೋಕಾನೇ ಮರ‍್ತು...' ಅಷ್ಟು ಸಾಕು. ಗೋಡೆವರೆಗೂ ಹೋದ ಕಾರು ತಾನೆ ರಿವರ್ಸ್ ತೊಗೊಂಡು ಹಿಂದೆ ತಿರುಗಿತು... ಅದರ ಹೆಡ್ ಲೈಟ್ ಬೆಳಕು ಹಾಲೆಲ್ಲಾ ಹರಡತೊಡಗಿತ್ತು... ಆ ಬೆಳಕಲ್ಲಿ ನಾನು ಮುಖ ತೋಯಿಸಿಕೊಳ್ಳತೊಡಗಿದೆ...

Friday, June 19, 2009


ನಿನ್ನೆ ಮತ್ತೆ ನಮ್ಮೂರಲ್ಲಿ ಮಳೆಯಾಯಿತು.
ಬೆಳಿಗ್ಗೆ ಎದ್ದು ನೋಡಿದ್ರೆ ಕಪ್ಪು ಟಾರು ರಸ್ತೆಗಳೆಲ್ಲ ಅಮ್ಮನ ಮಡಿಲಲ್ಲಿ 'ತಟ್ಟಿ-ತಟ್ಟಿ'ಮಾಡಿಸಿಕೊಂಡು ನಿದ್ದೆ ಮಾಡಿ ಎದ್ದ ಮಗುವಿಗೆ-ಅಮ್ಮ ಮುಖ ತೊಳೆಸಿ ಸಿಂಗಾರ-ಬಂಗಾರ ಮಾಡುವ ಹಾಗೆ ಕಳೆ ಕಳೆಯಾಗಿ ಕಾಣಿಸ್ತಾ ಇತ್ತು. ಚಿಕ್ಕ ಹುಡುಗರಾಗಿದ್ದಾಗ ಮಳೆ ಬಂದ್ರೆ 'ಕಾಗೆಗೂ - ನರಿಗೂ ಮದುವೆಯಂತೆ' ಅಂತ ಮಾತಾಡ್ಕೋತಾ ಇದ್ವಿ. ಮಳೆ ಜೀವನ್ಮುಖಿ, ಮಳೆ ನಿತ್ಯಸುಖಿ, 'ಮಳೆ'ಯ ದರ್ಶನವಾದರೆ ಸಾಕು ಮನಸ್ಸು fresh ಆಗುತ್ತೆ. 'ಮಳೆ' ಕೂಡ ಥೇಟ್ ಹುಡುಗಿ ತರಹ ! ಅದರ moodಗೆ ಹತ್ತು ಹಲವು ಬಗೆ... ಬೆಳಗಿನ ಜಾವ ಬೀಳೋ ತುಂತುರು ಸೋನೆಮಳೆ..., ಇಳಿ ಮದ್ಯಾನ್ಹ ಸುರಿಯೋ ಅಡ್ಡ ಮಳೆ..., ಸಂಜೆಯಾಗ್ತಾ ಇದ್ದ ಹಾಗೆ ಸುರಿಯೋ ಸಭ್ಯ ಮಳೆ.., ಬ್ಯೆಕಲ್ಲಿ ಕೂತ ಹುಡುಗಿಗೆ ಮುಂದೆ ಕುಳಿತ ಹುಡುಗನ್ನ ತಬ್ಬಬೇಕೆನಿಸೋ ಹಾಗೆ ಮಾಡೋ ತುಂಟ ಮಳೆ. ಬಿರಿದ ಭೂಮಿಗೆ ಬಿದ್ದು ರೈತನೋಡಲ ತಂಪಾಗಿಸುವ ಒಳ್ಳೆ ಮಳೆ..., 'ಆಗ ಬಂದೆ-ಈಗ ಬಂದೆ' ಅಂತ ಆಟವಾಡಿಸೋ ಹುಡುಗಾಟದ ಮಳೆ..., ಸ್ಕೂಲ್ ಮಕ್ಕಳ ಪಾದ ಮಾತ್ರ ಒದ್ದೆಯಾಗುವಂತೆ ಮಾಡುವ ಮುದ್ದು ಮಳೆ..., ನೆನಪುಗಳ ಬಡಿದೆಬ್ಬಿಸುವ ಭಾವುಕ ಮಳೆ.., ರಾತ್ರಿ ಮಾತ್ರ ಬೀಳುವ ನಿರುಪದ್ರವಿ ಮಳೆ.., ಎಲ್ಲಾ ಯೋಚನೆಗಳನ್ನ ತಲೆಕೆಳಗೆ ಮಾಡೋ ಅನಿರೀಕ್ಷಿತ ಮಳೆ.., ಪದೆ ಪದೇ ಅವಳ ನೆನಪು ತರೋ ಹುಚ್ಚು ಮಳೆ.., ಸ್ಪರ್ಶಕ್ಕೆ ಸಿಕ್ಕಿ ಸ್ವರ್ಗ ತೋರಿಸೋ ಆಲಿಕಲ್ಲು ಮಳೆ.., ಕೆಲವೇ ಜನಕ್ಕೆ ಸಿಗೋ 'ಪಕ್ಷಾಂತರಿ' ಮಳೆ.., ಸಾಕು ಅನಿಸಿದರೂ ಬಿಡದೆ ಸುರಿಯೋ ರಚ್ಚೆ ಮಳೆ.., ಹಳೆಯ ಕೊಳೆಗಳ ತೊಳೆಯೋ ಶುಭ ಮಳೆ.., ಮಧುರ ಹಾಡುಗಳ ನೆನಪಿಸೋ ಮುಂಗಾರು ಮಳೆ...
'ಮಳೆ' ನೀನಂದ್ರೆ ನಂಗಿಷ್ಟ... ಸತ್ತು ಹೋಗೋಷ್ಟು !!!

Wednesday, May 20, 2009

Gift


you are in love with me,
I shall make you perpelexed

Do not build much,
for I intend to have you in ruins
If you build two hundred houses in a manner that bees do,
I shall make you as homeless as a fly,
If you are the mount Qraf in stability,
I shall make you whirl like a millstone.

- Rumi


ಉಡುಗೊರೆ
('ಮಳೆ'ಯಿಂದ 'ಹನಿ'ಗೆ...)

ಹೆಚ್ಚಿಗೇನೂ ಕಟ್ಟಬೇಡ
ನಿನ್ನನ್ನುಳಿಸುವೆ ಶಿಥಿಲಗಳ ನಡುವೆ
ಜೇನಿನಂತೆ ನೂರಿನ್ನೂರು ಮನೆ ಕಟ್ಟಿದಲ್ಲಿ,
ಸೂರಿಲ್ಲದ ನೊಣವಾಗಿಸುವೆ.
ಪರ್ವತದಷ್ಟು ಅಚಲವಾಗಿದ್ಡೋದೇ
ತಿರುಗಿಸುವೆ ರಾಗಿಕಲ್ಲಾಗಿಸಿ ಗಿರ್ರನೆ.

ನನ್ನನ್ನೇ ಪ್ರೀತಿಸಿದರೆ
ತಬ್ಬಿಬ್ಬಾಗಿಸುವೆ ನಿನ್ನನ್ನೇ !


Saturday, May 16, 2009

Ninnolumeyindale...

'ಊರು ಬಿಡ್ಬೇಕು...'

ಹೌದು, ಬೇರೆ ದಾರಿಯಿಲ್ಲ, ಇಲ್ಲಿದ್ರೆ ಕಿತ್ತು ತಿನ್ನೋ ನೆನಪುಗಳಿಂದ ನನಗೆ ಮುಕ್ತಿನೇ ಇಲ್ಲ. ಯಾವ ರಸ್ತೆಗೆ ಹೋದ್ರು ಯಾವತ್ತೋ ಅವ್ಳು ಈ ರಸ್ತೇಲಿ ಓಡಾಡಿದ್ದು ಅನ್ನೋದು ನೆನಪಾಗುತ್ತೆ. ಮನಸ್ಸು ಬೇಡ ಬೇಡವೆಂದರು ಕೇಳದೆ ನೆನಪುಗಳಿಗೆ ಜೋತುಬೀಳತ್ತೆ. ಯಾಕೆ ಸುಮ್ನೇ ಈ ನರಳಿಕೆ. ಒಂದು ಲೆಟರ್ ಬರೆದು ಇಟ್ಕೊಂಡು ಈ ಸರ್ತಿ ಸಿಕ್ಕಾಗ ಕೊಟ್ಟು ಬಿಡಬೇಕು... ಅವಳೇ ನಿರ್ಧಾರ ಮಾಡ್ಲಿ. ಹೌದು ! ಅದೇ ಸರಿ. ಆ ಲೆಟರ್ ನಲ್ಲಿ ಎಲ್ಲ ಬರೆದು ಬಿಡಬೇಕು...

''ನೋಡು ! ನಿನ್ನನ್ನ ಇಷ್ಟ ಪಡೋವ್ರು ಬೇಕಾದಷ್ಟು ಜನಾ ಇರಬಹುದು, ಆದ್ರೆ ನನ್ನಷ್ಟು ಪ್ರೀತಿಸೋವ್ರು , ರೆಸ್ಪೆಕ್ಟ್ ಕೊಡೋರು ಇನ್ಯಾರು ಸಿಗೋದಿಲ್ಲ... ನನ್ನ ಪಾಲಿಗೆ ನೀನು ಕೇವಲ ಇಷ್ಟ ಪಟ್ಟ ಹುಡುಗಿಯಲ್ಲ... ನೀನೆ ಗುರಿ.., ನೀನೆ ಗಮ್ಯ.., ನನ್ನ ಪ್ರತಿ ಮುಂಜಾವು ಶುರುವಾಗೋದು ನಿನ್ನ ನೆನಪಿನೊಂದಿಗೆ.. , ನನ್ನ ಒಟ್ಟು ಕನಸುಗಳ ಮೂರ್ತ ರೂಪ ನೀನು... ಅಮ್ಮ ಹಾಕೋ ಕೈ ತುತ್ತು... ನೋಟ್ ಬುಕ್ಕಲ್ಲಿ ಮರಿ ಹಾಕಿಸಲು ಇತ್ತುಕೊಳ್ತಿದ್ದ ಸಾವಿರ ಕಣ್ಣಿನ ನವಿಲು ಗರಿ, ಸಂಜೆ ವೇಳೆ ಸುರಿಯೋ ಅಡ್ಡ ಮಳೆ... ಮಳೆ ಬಿದ್ದಾಗ ಏಳೋ ಮಣ್ಣ ವಾಸನೆ... ನೀನು 'ಮಳೆ'ಯಾದರೆ, ನಾನು 'ಹನಿ'... ನೀನು ಸಮುದ್ರವಾದರೆ... ನಾನು ಮರಳ ದಂಡೆಯ ಮೇಲೆ ಪುಟ್ಟ ಮಕ್ಕಳು ಕಟ್ಟಿದ ಕಪ್ಪೆ ಗೂಡು... ಯಾವಾಗಲೋ ಒಮ್ಮೆ ಇದ್ದಕ್ಕಿಂದಂತೆ ನೆನಪಾಗೋ ಮಧುರ ಹಾಡು... ದೇವಾಸ್ಥಾನದ ದೀಪದ... '' hello, hello...hold on... gimme a break... ಸಣ್ಣ ಹುಡುಗಿ ಅವ್ಳು, ಗಮ್ಯ-ಗುರಿ ಅಂತೆಲ್ಲ ಬರೆದು ಗಾಬರಿ ಮಾಡ್ಬೇಡ, ಅದು ಅಲ್ದೆ ಅವ್ರ ಮನೆ ದೇವರು ಬೇರೆ ಉಗ್ರ ನರಸಿಂಹ... ಗೊತ್ತಲ್ಲ ! easyಯಾಗಿ ಅರ್ಥ ಆಗೋ ಹಾಗೆ ಬರಿ '' ಅಂತ order ಮಾಡ್ತು ನನ್ನ ಮನಸ್ಸು. ಸರಿ ಅನ್ನಿಸಿ ಸರಳವಾಗಿ ಬರೆಯೋಕೆ ಕೂತೆ. ಸುಮ್ನೆ ಯಾಕೆ ಸುತ್ತಿ ಬಳಸಿ ಬರೆಯೋದು. ನೇರವಾಗಿ ಮೂರೂ-ಮತ್ತೊಂದು ಪ್ರಶ್ನೆ ಕೇಳಿ openion ತಗೊಂಡ್ರೆ ಆಯ್ತು. ನಮ್ಮ ad-mediaದಲ್ಲಿ ಇದನ್ನೇ ತಾನೇ ಮಾಡೋದು - KISS (Keep it short & sweet). ಹಾಗೆ ಬರೆದು ಕೇಳಿದ್ರೆ ಆಯಿತು ಅಂತ ಈ ಕೆಳಗಿನ ಪ್ರಶ್ನೆಗಳನ್ನು ಬರೆದು ಇಟ್ಟುಕೊಂಡೆ. ... ಇದಾಗಿ ಮೂರೂ ದಿನ ಆದ್ರೂ ಅವ್ಳು ಸಿಕ್ಕಲಿಲ್ಲ... ಜೇಬಲ್ಲಿ ಬೆಂಕಿ ಇಟ್ಟುಕೊಂಡ feeling ನಂಗೆ. ಕಡೆಗೆ as usual ಗಾಂಧೀ ಬಜಾರ್ನಲ್ಲಿ ಸಿಕ್ಕಾಗ ನಿಲ್ಲಿಸಿ-ಮಾತಾಡಿ ಲೆಟರ್ ಕೊಟ್ಟೆ. ಓದಿ ಆಮೇಲೆ ಯೋಚಿಸಿ ಬರೆದು ಕೊಡೋದಾಗಿ ಹೇಳಿ ತೊಗೊಂಡು ಹೋದಳು. ಅವ್ಳು ಆ letterಗೆ ಉತ್ತರ ಬರೆದು ಕಲಿಸೋ ಅಷ್ಟರಲ್ಲಿ ನನಗೆ ಸಾಕು ಸಾಕಾಗಿ ಹೋಗಿತ್ತು. ಕಡೆಗೂ ಅವ್ಳು ಉತ್ತರ ಕೊಟ್ಳು !

ಅದು...

1) ಇಷ್ಟು ದಿನಗಳ interaction ನಲ್ಲಿ ಒಂದು ದಿನ, atleast ಒಂದು ಕ್ಷಣನು ನನ್ನ ಮೇಲೆ ಪ್ರೀತಿ ಹುಟ್ಟಲಿಲ್ವಾ ?

ಇಲ್ಲಾ

2) ನಾನು ನಿನಗೆ ಸಿಗದೇ ಇದ್ದಾಗಲೂ ನೀನು ಸುಖಾವಾಗಿ ಇರ್ತ್ಯಾ ?

ಇರಬಲ್ಲೆ

3) suppose... suppose ನಾನು ನಿಮ್ಮ ತಂದೆ-ತಾಯಿನಾ ಈ ಮದ್ವೆಗೆ ಒಪ್ಪಿಸಿದರೆ ನೀನು ನನ್ನ ಸಂಗಾತಿಯಾಗಿ ಇರ್ತ್ಯಾ ?

ಇಲ್ಲಾ

4) ನಿನ್ನ ಪ್ರೀತಿಗೆ ನಾನು ಅರ್ಹನಲ್ಲ ಅಂತ ನಿನಗೆ ನಿಜಕ್ಕೂ ಅನ್ಸಿದ್ರೆ ನನ್ನ ನೆನಪು ಮಾಡಿಕೊಳ್ದೆ ಇರ್ತ್ಯಾ ?

ಇರ್ತಿನಿ

ಇದನ್ನು ಓದಿ ನೀವು ಅವ್ಳು-ಅವ್ನಿಗೆ ಸಿಗೋಲ್ಲ ಅಂತ easyಯಾಗಿ ತಿರ್ಮಾನಕ್ಕೆ ಬಂದು ಬಿಡ್ತೀರಿ. ಅದು ನಿಮಗೆ ಸುಲಭ ಕೂಡ. ಆದ್ರೆ ಪ್ರೀತಿಸ್ತಾ ಇರೋದು ನಾನು ನೋಡಿ ಹಾಗಾಗಿ ಈ ದೇಹ ಸತ್ತು ಮಣ್ಣಿಗೆ ಸೇರೋವರೆಗೆ ಪ್ರೀತಿಸ್ತಾನೆ ಇರೋದು ಅನಿವಾರ್ಯ. ಅದು ಅಲ್ದೆ ಎಷ್ಟೆಲ್ಲಾ management training attend ಮಾಡಿದೀನಿ. Life ಬಗ್ಗೆ ಎಷ್ಟೆಲ್ಲಾ postive ಆಗಿ ಇದ್ದೀನಿ. ಅದು ಅಲ್ದೆ ಅವ್ಳು ಬರೆದು ಕೊಟ್ಟಿರೋದನ್ನಾ ಸ್ವಲ್ಪ detail ಆಗಿ ಓದಿ ನೋಡಿ..... ಹಾಗಲ್ಲಾ.. ನೀವು ತಪ್ಪು ತಪ್ಪಾಗಿ ಓದ್ತಾ ಇದೀರಾ.. ನೀವು 'ಮೇಲಿನಿಂದ-ಕೆಳಕ್ಕೆ' ಓದ್ತಾ ಇದೀರಾ.... ಅದೇ 'ಕೆಳಗಿನಿಂದ-ಮೇಲಕ್ಕೆ' ಒಮ್ಮೆ ಓದಿಕೊಂಡು ಹೋಗಿ !

... ನಿಜವಾದ ಪ್ರೀತಿ ಅಂದ್ರೆ ಇದು.. wish me good luck ! ಕಾಯ್ತೀನಿ ಅವ್ಳು ಸಿಗೋವರೆಗೂ..., after all ಇನ್ನು ಬದುಕಿರೋದಾದ್ರು ಎಷ್ಟು ವರ್ಷಾ ?

ಅಂದ್ಹಾಗೆ! ಬೆಂಗಳೂರಲ್ಲಿ ಸೈಟ್ ರೇಟುಗಳು ಕಮ್ಮಿಯಾಗಿದೆಯಂತೆ ಹೌದಾ !

Friday, May 1, 2009

Kolaj

Naaನು ಸತ್ತು ಹೋಗಿದ್ದೆ.

ಹಾಸ್ಪಿಟಲ್ uniform ಧರಿಸಿದ್ದ ಇಬ್ಬರು ವಾರ್ಡ್ ಬಾಯ್ ಗಳು ಸ್ಟ್ರೆಚರ್ ಮೇಲೆ ಮಲಗಿಸಿಕೊಂಡು ತಂದು ಗಾಡಿಯಲ್ಲಿ ಮಲಗಿಸಿದರು. ನಿಟ್ಟುಸಿರು ಬಿಟ್ಟ ಡ್ರೈವರ್ ಡೋರ್ ಕ್ಲೋಸ್ ಮಾಡಿ ಗಾಡಿ ಸ್ಟಾರ್ಟ್ ಮಾಡ್ದಾ. ನನ್ನ ಪಕ್ಕ ಕುಳಿತ ವಾರ್ಡ್ ಬಾಯ್ ಡ್ರೈವರ್ ಗೆ '' ಶಿವೂ, ಕೋಣನ ಕುಂತೆ ಕ್ರಾಸ್ ಮನೆ.... ಫೋನ್ ಮಾಡಿದೀನಿ... ನಿಧಾನಕ್ಕೆ ಓಡ್ಸು'' ಅಂದ. ಪ್ರತಿಯಾಗಿ ಡ್ರೈವರ್ '' ಸರಿ, ಏನ್ ಬೊಮ್ಮನ್ ಫ್ಯಾಮಿಲಿ ನಾ ಈಯಪ್ಪಂದು ? '' ಅಂದ. '' ಇರಬೇಕೇನೋ ? ಮುಖ ನೋಡಿದ್ರೆ ಅಂಗೆ ಅನ್ನಿಸ್ತದೆ, ಈ ವಾರದಲ್ಲಿ ಇದು ಮೂರ್ನೆದೂ... ಆದ್ರೂ ಅಡ್ಮಿಟ್ ಅಗೋ ಜನಾ ಕಂಮಿಯಗಲ್ಲ ನೋಡು !'' '' ಅಯ್ಯೋ ! ಸುಮ್ನಿರು ಗುರು ಹೆಣ ಬಿದ್ರೇನೆ ನಮಗ್ ಊಟಾ... ಒಸಿ ಬೇಜಾರಾಯ್ತದೆ... ಆದ್ರೆ ನಮ್ ಹೆಂಡ್ರು-ಮಕ್ಳು ಗಳು ಬದುಕ್ಬ್ಯಾದ್ವಾ.? '' ಅಂದ ಮಾಡರ್ನ್ ಸತ್ಯ ಹರಿಶ್ಚಂದ್ರ.

ನನಗೆ ಹೆಚ್ಚಿಗೇನು ಆಶ್ಚರ್ಯ ಆಗ್ಲಿಲ್ಲ. ಇದಕ್ಕಿಂತ ಹೆಚ್ಚಿನ ಕ್ರುಎಲ್ ರಿಯಾಲಿಟಿ ಗಳನ್ನೂ ಈಗಾಗಲೇ ನೋಡಿ ಬಿಟ್ಟಿದ್ದರಿಂದ. ಗಾಡಿ ಲಾಲ್ ಬಾಗ್ ಮೇನ್ ಗೇಟ್ ಬಳಿ ಟರ್ನ್ ತಗೊಂಡು ಬಸವನಗುಡಿ ಕಡೆಗೆ ಓಡತೊಡಗಿತು. ನನ್ನ ಜೀವನದ ಪ್ರಮುಖ ಘಟನೆಗಳಿಗೆ ಕಾರಣವಾದ ಗಾಂದಿ ಬಜಾರ ದ ಮೂಲಕ ಈ ಪರಿಸ್ಥಿತಿಯಲ್ಲಿ ಹೋಗ್ತಾ ಇರೋದು ನೋಡಿ ಒಂಥರಾ ಖುಷಿ ಯಾಗೆ ಇತ್ತು. ಬುದ್ದಿಯೇಲ್ಲದ ಜನ ಉಸಿರಾಡೋದು ನಿಲ್ಲಿಸಿದ ಕುಡ್ಲೆ ಮನುಷ್ಯ ಸತ್ತು ಹೋಗ್ತಾನೆ ಅಂತಾರೆ. ನಾನು ಸತ್ತೆ ಇಲ್ಲ ! ಎಲ್ಲಾ ನೋಡ್ತಾಯಿದೀನಿ, ಎಲ್ಲಾ ಕೇಳಿಸ್ತಾನೇ ಇದೆ. ಹೇಗೂ ಮನೆಗ್ ಹೋಗ್ತಿವಲ್ಲಾ ಅಲ್ಲಿ ಹೇಳಿದರಾಯ್ತು ಅಂತ ಸುಮ್ನೆ ಇದೀನಿ. ಅಮ್ಮ-ಅಕ್ಕ-ಶರಣ್ಯ ಇರ್ತಾರೆ, ಅಣ್ಣ as usual ಆಫೀಸ್ ಅಲ್ಲೇ ಇರ್ತಾನೆ. ಅಲ್ಲಿ ಹೇಳಿದ್ರಾಯ್ತು ಇದನೆಲ್ಲಾ, ' ಮನುಷ್ಯ ಸಾಯೋದು ಆಯಸ್ಸು ತೀರಿಯಲ್ಲ-ಆಸೆಗಳು ತೀರಿ'' ಅಂತ. ಗಾಡಿ ನ್ಯಾಷನಲ್ ಕಾ-ಆಪರೇಟಿವ್ ಬ್ಯಾಂಕ್ ಹತ್ರ ಸಿಗ್ನಲ್ ಗಾಗಿ ನಿಂತಿತು.
ಅರೆ ! ಮರೆತೇ ಹೋಗಿತ್ತು. ಈ ಬ್ಯಾಂಕ್ ಗೆ ನಾನು ಮೆಂಬರ್, ಎರಡು ವರ್ಷ ಗಳಿಂದ ಈ ಕಡೆ ತಲೇನೆ ಹಾಕಿಲ್ಲ. ಡಿವಿಡೆಂಡ್ ಕೂಡ ತಗೊಂಡಿಲ್ಲ. ಶರಣ್ಯಂಗೆ ಹೇಳ್ಬೇಕು ''ನೋಡು, ನಾನು ಸತ್ರೆ ಇದ್ನೆಲ್ಲಾ ಆದಷ್ಟು ಬೇಗ claim ಮಾಡ್ಕೋ, ಮೂರನೆ ವರ್ಶಾನು ಡಿವಿಡೆಂಡ್ ತಗೊಳ್ದೆ ಇದ್ರೆ ರಿಸರ್ವ್ ಫಂಡ್ ಗೆ ಟ್ರಾನ್ಸ್ಫರ್ ಮಾಡಿ ಬಿಡ್ತಾರೆ, ಹಾಗೆ LIC ಪಾಲಿಸಿಗಳಿಗೆ ಅಮ್ಮನ nominy ಮಾದೆದೀನಿ, ನಮ್ಮ ಮ್ಯಾರೇಜ್ ರೆಗಿಸ್ತ್ರಶನ್ ಸರ್ಟಿಫಿಕೇಟ್ produce ಮಾಡಿ claim ಮಾಡು, ಹಾಗೆ ಬ್ಯಾಂಕ್ accounts, ಗ್ರಾಚುತಿ , PF ದೂ ಕೂಡ. ಕಾರ್ ಲೋನ್ NOC ಬಂತಾ ? ಛೆ ! ಎಷ್ಟೊಂದು ಕೆಲ್ಸಾ ? ಹಾಗೇ Diary ನಲ್ಲಿ ಅರುಣ್, ಅಖಿಲ ಫೋನ್ ನಂಬರ್ ಇದೆ. ಏನಾದ್ರೂ ಹೆಲ್ಪ್ ಬೇಕಾದ್ರೆ . ಅಥವಾ ನಿಮ್ ತಂದೇನ ಒಂದೆರಡು ದಿನ ಬಂದು ಇರೋಕೆ ಹೇಳು.

ಅಯ್ಯೋ ! ಇದೆಲ್ಲಾ ನಾನು ಸತ್ತು ಹೋಗಿದೀನೀ ಅಂತ ಹೇಳ್ತಿಲ್ಲ ಮಾರಾಯ್ತಿ. ಸತ್ತಾಗ ನಿನಗೆ easy ಯಾಗಲೀ ಅಂತ ಹೇಳ್ತಾ ಇರೋದು. ಪಾಪಿ ಚಿರಾಯು ಕಣೇ ! ನಿನ್ನ ಕೆನ್ನೆ ಗಿಲ್ಲಿ-ಜಡೆ ಎಳೆದು ಇನ್ನು ಎಷ್ಟು ವರ್ಷ ಗೋಳು ಹುಯ್ಕೊಬೇಕೋ ಏನೋ ? ಇನ್ನು ನಾಲ್ಕು ಸ್ಕ್ರಿಪ್ಟ್ ಬಾಕಿ ಇದೆ. ಇನ್ನು ಎಷ್ಟೊಂದು ನಾಟ್ಕ ನೋಡ್ಬೇಕು ? ನೀನ್ ಬೇರೆ ಮತ್ತೆ ಡಾನ್ಸಿಗೆ ಸೇರ್ತಿನೀ ಅಂತಿದ್ಯಾ ! ನಿನ್ನ ಪ್ರಾಕ್ಟೀಸ್ ಗೆ ಅಂತ ಒಂದು ಹಾಲ್ ಕಟ್ಟಿಸಿಕೊಡ್ಬೇಕು... ಹಂಪ್ ಬಂತು ಅಂತ ಡ್ರೈವರ್ ಸಡನ್ ಬ್ರೇಕ್ ಹಾಕ್ದ, ವಾರ್ಡ್ ಬಾಯ್ ಬೀಳೋಕೆ ಹೋಗಿ ಸಂಭಾಳಿಸಿಕೊಂಡು ''ಶಿವೂ, ಹುಶರಪ್ಪ ಒಳಗೆ ಹೆಣ ಒಂದೇ ಅಲ್ಲಾ, ನಾನು ಇದೀನೀ ?'' ಅಂದ. ತೆಗೆದು ಬಾರಿಸಿಬಿಡೋಣ ಅನ್ನಿಸ್ತಾ ಇತ್ತು . ಪಾಪಿ ! ಹೆಣ ಅಂತಾನೆ. ಇನ್ಯಾವತ್ತು ಇವರ ಹಾಸ್ಪಿಟಲ್ ಗೆ ಕಾಲಿಡಬಾರದು. ಮನೇನೂ ಬಂತಲ್ಲಾ, ಶರಣ್ಯಂಗೆ ಹೇಳ್ಬೇಕು '' ಸುಂದ್ರಮ್ಮ, ಕೋಪ ಇದ್ರೆ ಬಯ್ದು ತೀರೀಸಿಕೋ, ಹಿಂಗೆಲ್ಲ ಡಬ್ಬ ಹಾಸ್ಪಿಟಲ್ ಗೆ ಸೇರಿಸಬೇದಾಂತ !'' ಮನೆ ಮುಂದೆ ಗಾಡಿ ನಿಲ್ತು. ಅಮ್ಮ ಅಳ್ತಾ ಇರೋದು ಕೇಳಿಸ್ತಾ ಇತ್ತು . ಅಷ್ಟರಲ್ಲಿ ಶರಣ್ಯ ಓಡಿಬಂದವಳು ಗೇಟಿನ ಬಳಿ ನಿಂತು ತಲೆ ಎತ್ತಿ ''ಅಮ್ಮಾ ! ಬಾಡಿ ಬಂತು'' ಅಂದ್ಲು.ಆಗ ಬಂತು ನನಗೆ ಸಾವು. ಕಾಲ ಒಮ್ಮೆಗೇ ಸ್ತಂಭಿಸಿದ ಹಾಗೇ... ಅಲ್ಲಿಯವರೆಗೂ ಕಾಣಿಸುತ್ತಾ ಇದ್ದದ್ದು-ಕೇಳಿಸುತ್ತಾ ಇದ್ದದ್ದು ಒಮ್ಮೆಲೇ ಸ್ತಬ್ಧ ಗೊಂಡು ನನ್ನ ಸಾವಿಗೆ ಅಧಿಕೃತ ವಾಗಿ ಚರಮಗೀತೆ ಹಾಡಿತು. ಕಣ್ಣಿನ ಅಂಚಿನಿಂದ ಹರಿದ ಎರಡು ಹನಿ ಕಣ್ಣೀರು ಒರೆಸುವವರಿಲ್ಲದೆ ಕೆನ್ನೆಯ ಮೇಲೆ ಕರೆಗಟ್ಟತೊಡಗಿತು. ನಾನು ಸತ್ತು ಹೋಗಿದ್ದೆ